

ಜಗಳೂರು: ತರಳಬಾಳು ಹುಣ್ಣಿಮೆ ಮಾದರಿಯಲ್ಲಿ ರಾಜ್ಯದೆಲ್ಲೆಡೆ ವಾಲ್ಮೀಕಿ ಜಾತ್ರೆ ಆಚರಿಸಬೇಕಾಗಿದೆ ಎಂದು ಶಾಸಕ ಹಾಗೂ ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷ ಬಿ. ದೇವೇಂದ್ರಪ್ಪ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ವಾಲ್ಮೀಕಿ ಜಾತ್ರೆ ಪ್ರಯುಕ್ತ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
12ನೇ ಶತಮಾನದಲ್ಲಿ ಬಸವಣ್ಣನವರು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟ ಎನ್ನುವ ರೀತಿಯಲ್ಲಿ ಪಕ್ಷಭೇದ ಮರೆತು ಎಲ್ಲರನ್ನೂ ಒಂದೇ ವೇದಿಕೆಗೆ ತರುವ ಕೆಲಸವನ್ನು ಶ್ರೀಮಠ ಮಾಡುತ್ತಿದೆ ಎಂದು ತಿಳಿಸಿದರು.
ಜಾತ್ರೆ ಎಂದಾಕ್ಷಣ ಮೌಢ್ಯ, ಅಂಧಕಾರ ಕಣ್ಣಮುಂದೆ ಬರುತ್ತವೆ. ಆದರೆ ವಾಲ್ಮೀಕಿ ಜಾತ್ರೆಯಲ್ಲಿ ಇಂತಹ ಯಾವ ಆಚರಣೆ ಇರುವುದಿಲ್ಲ. ಇಲ್ಲಿ ಕೇವಲ ಶಿಕ್ಷಣದ ಜತೆಗೆ ಸಂವಿಧಾನಬದ್ಧ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲಾಗುವುದು ಎಂದರು.
ಫೆ.8.ಮತ್ತು 9 ರಂದು ಏಳನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರೆ, ಪುಣ್ಯಾನಂದ ಪುರಿ ಮಹಾಸ್ವಾಮಿಗಳ 18ನೇ ವರ್ಷದ ಪುಣ್ಯಾರಾಧನೆ, ಪ್ರಸನ್ನಾನಂದಪುರಿ ಶ್ರೀಗಳು ಪಟ್ಟಾಧ್ಯಕ್ಷರಾಗಿ 17 ವರ್ಷ ತುಂಬಿದ ಹಿನ್ನೆಲೆ ವಿಶೇಷ ಕಾರ್ಯಕ್ರಮ, ಧರ್ಮಗೋಷ್ಠಿ, ಮಹಿಳಾಗೋಷ್ಠಿ, ಸಾಧಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
ಜಾತ್ರೆಯಲ್ಲಿ ಯಾವುದೇ ಸಮಸ್ಯೆ ಆಗದಂತೆ ಜಿಲ್ಲಾಡಳಿತ, ಅನುಷ್ಠಾನಾಧಿಕಾರಿ ಮುಂಜಾಗ್ರತ ಕ್ರಮ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.
ವಾಲ್ಮೀಕಿ ಜಾತ್ರಾ ಸಮಿತಿ ಸಂಚಾಲಕ ಶ್ರೀನಿವಾಸ್ ದಾಸಕರಿಯಪ್ಪ ಮಾತನಾಡಿ, ಸಿಎಂ ಸಿದ್ದರಾಮಯ್ಯ, ವಿರೋಧ ಪಕ್ಷ ನಾಯಕ ಆರ್.ಅಶೋಕ್, ಸತೀಶ್ ಜಾರಕಿಹೊಳಿ ಸೇರಿ ಅನೇಕ ರಾಜಕೀಯ ಗಣ್ಯರು ಜಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ತಾಲೂಕು ನಾಯಕ ಸಮಾಜದ ಅಧ್ಯಕ್ಷ ಬಡಯ್ಯ, ವಕೀಲರ ಸಂಘದ ಅಧ್ಯಕ್ಷ ಬಸವರಾಜ್ ಮರೇನಹಳ್ಳಿ, ಸಾಹಿತಿ ಎನ್. ಟಿ. ಎರ್ರಿಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್, ನೌಕರರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಮುಖಂಡರಾದ ಲೋಕೇಶ್, ಕೃಷ್ಣಮೂರ್ತಿ, ಪುರುಷೋತ್ತಮನಾಯ್ಕ, ನಿವೃತ್ತ ಅಧಿಕಾರಿ ಬಿ. ಮಹೇಶ್ವರಪ್ಪ, ಕಾಂತರಾಜ್, ಪಲ್ಲಾಗಟ್ಟೆ ಶೇಖರಪ್ಪ ಮತ್ತಿತರರಿದ್ದರು.