ದೇವೇಂದ್ರಕುಮಾರ ಜನಪದದ ಜೀವಾಳ

19 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ದಿ. ಡಾ. ದೇವೇಂದ್ರಕುಮಾರ ಹಕಾರಿ ಜನಪದದ ಜೀವಾಳ. ಅವರ ಸರಳ ಜೀವನ ಹಾಗೂ ಉನ್ನತ ವಿಚಾರಗಳು ಎಂದೆಂದಿಗೂ ಸ್ಮರಣೀಯ ಎಂದು ಕವಿವಿ ಪ್ರಸಾರಾಂಗದ ವಿಶ್ರಾಂತ ನಿರ್ದೇಶಕ ಡಾ. ಚಂದ್ರಶೇಖರ ರೊಟ್ಟಿಗವಾಡ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಇತ್ತೀಚೆಗೆ ಏರ್ಪಡಿಸಿದ್ದ ಡಾ. ದೇವೇಂದ್ರಕುಮಾರ ಹಕಾರಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಹಕಾರಿ ಅವರ ಜೀವನ ಮತ್ತು ಸಾಹಿತ್ಯ ಕುರಿತು ಮಾತನಾಡಿದರು.

ದೇವೇಂದ್ರಕುಮಾರ ಹಕಾರಿ ಜಾನಪದ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು. ಎಂದೆಂದಿಗೂ ಅವರು ತಮ್ಮ ಪಾಂಡಿತ್ಯ ಪ್ರದರ್ಶಿಸಲಿಲ್ಲ. ಎಲ್ಲ ಜನಪರ ಹೋರಾಟಗಳ ಮೂಲಕ ಬದುಕು ಕಟ್ಟಿಕೊಂಡರು. ಸಾರ್ವಜನಿಕ ಬದುಕಿನಲ್ಲೂ ಅವರು ತೊಡಗಿಸಿಕೊಂಡಿದ್ದರು ಎಂದರು.

ಕಾದಂಬರಿ, ಕಾವ್ಯ, ವಿಮರ್ಶೆ, ನಾಟಕ, ಜೀವನ ಚರಿತ್ರೆ ಹಾಗೂ ಜಾನಪದಕ್ಕೆ ಸಂಬಂಧಿಸಿದ 60ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ಅನುವಾದ ಕ್ಷೇತ್ರದಲ್ಲೂ ಅವರ ಸಾಧನೆ ಅನನ್ಯ. ಬಹುಭಾಷಾ ಪಂಡಿತರಾದ ಅವರು ಬೋಧನೆ ಹೊರತುಪಡಿಸಿ ಅನ್ಯ ವಿಷಯಗಳತ್ತ ಗಮನ ಹರಿಸಲಿಲ್ಲ. ಅವರ ಕ್ರಿಯಾಶೀಲತೆ ಇಂದಿನ ಯುವಕರಿಗೆ ಮಾದರಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿದರು. ದತ್ತಿದಾನಿ ರವಿಶಂಕರ ಹಕಾರಿ, ಉದಯಶಂಕರ ಹಕಾರಿ, ಡಾ. ವಿಲಾಸ ಕುಲಕರ್ಣಿ, ಡಾ. ಪ್ರಭಾಕರ ಲಗಮಣ್ಣವರ, ನಾರಾಯಣ ಭಜಂತ್ರಿ, ದೇಸಾಯಿಗೌಡ ಪಾಟೀಲ, ಹರಿಲಾಲ ಪವಾರ, ಇತರರು ಇದ್ದರು.

ಸತೀಶ ತುರಮರಿ ಸ್ವಾಗತಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಗುರು ಹಿರೇಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net