

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತು ಕೊಟ್ಟು ಅನುದಾನ ನೀಡುತ್ತಿದ್ದಾರೆ, ಹಿಂದಿನ ಬಿಜೆಪಿ ಸರ್ಕಾರದಲ್ಲಿದ್ದ ಅನುದಾನದ ತಾಪತ್ರಯಗಳು ಈಗಿಲ್ಲ ಎಂದು ಶಾಸಕ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೇಳಿದರು.
ನಗರದ ವಾರ್ಡ್ ನಂಬರ್ 73ರಲ್ಲಿ 5 ಕೋಟಿ ರೂ. ವೆಚ್ಚದ ಸಿಸಿ ರಸ್ತೆ, ಒಳಚರಂಡಿ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಾಗಿ 1.20 ಲಕ್ಷ ಕೋಟಿ ರೂ. ಬಜೆಟ್ನಲ್ಲಿ ಮೀಸಲಿಡಲಾಗಿದೆ. ಜನರ ನಿರೀಕ್ಷೆಯಂತೆ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಅತ್ಯುತ್ತಮ ಆಡಳಿತ ನಡೆಸಲಾಗುತ್ತಿದೆ ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇನ್ನು ವರ್ಷ ಕೂಡ ಕಳೆದಿಲ್ಲ. ಆಗಲೇ ಕ್ಷೇತ್ರದ ಅಭಿವೃದ್ಧಿಗೆ ಹತ್ತಾರು ಕೋಟಿ ರೂ. ಅನುದಾನ ನೀಡಿದೆ. ಮುಂದಿನ ದಿನಗಳಲ್ಲಿ ನೂರಾರು ಕೋಟಿ ರೂ. ಅನುದಾನ ತಂದು ಇನ್ನು ಹೆಚ್ಚಿನ ಅಭಿವೃದ್ಧಿ ಕಾರ್ಯ ಮಾಡುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.
ಸರ್ಕಾರದ ವಿವಿಧ ಯೋಜನೆಗಳ ಲಾನುಭವಿಗಳೊಂದಿಗೆ ಶಾಸಕರು ಚರ್ಚೆ ನಡೆಸಿದರು.
ಮುಖಂಡರಾದ ದ್ಯಾಮಣ್ಣ ಡೋಂಗಿ, ಗಣೇಶ ಪೂಜಾರ, ಚಂದ್ರು ಪೂಜಾರ, ಸುರೇಶ ಶೆಟವಾ, ರಾಮು ಪೂಜಾರ, ಸಂತೋಷ ಪೂಜಾರ, ದೇವೇಂದ್ರ ದುಂಡಿ, ಬಸವರಾಜ ಹಂಚಿನಮನಿ, ಧರ್ಮರಾಜ ಪೂಜಾರ, ಬಸವರಾಜ ದೇವರಮನಿ, ಪ್ರಕಾಶ ಒಂಟಮನಿ, ಸುಭಾಷ ಪೂಜಾರ, ಶಾಮ ರಾಮನಾಥ, ವೀರಪ್ಪ ರಘು ಮೊದಲಾದವರು ಇದ್ದರು.