

ಬೆಂಗಳೂರು: ರಾಜಧಾನಿಯ ಅತಿ ದೊಡ್ಡ ಜಲ ತಾಣ ಎನಿಸಿರುವ ವತೂರು ಕೆರೆ ಹಾಗೂ ಬೆಳ್ಳಂದೂರು ಕೆರೆಗಳ ಪುನಶ್ಚೇತನ ಕಾಮಗಾರಿ ಸ್ಥಗಿತಗೊಂಡಿದ್ದು, ಆ ಭಾಗದಲ್ಲಿ ಪರಿಸರ ಸಂರಕ್ಷಣಾ ಕಾರ್ಯಕ್ಕೆ ಹಿನ್ನಡೆ ಉಂಟಾಗಿದೆ.
ಎರಡೂ ಕೆರೆಗಳಲ್ಲಿ ಉಂಟಾಗಿದ್ದ ನೊರೆ ಸಮಸ್ಯೆ ನಿವಾರಿಸಲು ಮೊದಲ ಹಂತದಲ್ಲಿ ಕಳೆ ಸಸ್ಯವನ್ನು ತೆಗೆದುಹಾಕಲಾಗಿತ್ತು. ಬಳಿಕ ಹೂಳೆತ್ತುವ ಕಾರ್ಯಕ್ಕೆ ಚಾಲನೆ ದೊರೆತು ಬೆಳ್ಳಂದೂರು ಕೆರೆಯಲ್ಲಿ ಶೇ.60 ಹಾಗೂ ವರ್ತೂರು ಕೆರೆಯಲ್ಲಿ ಶೇ.95 ಹೂಳನ್ನು ಹೊರಹಾಕಲಾಗಿದೆ. ಕಳೆದ ವರ್ಷ ಭಾರೀ ಮಳೆಯಿಂದಾಗಿ ಕೆರೆ ಒಡಲಿನಲ್ಲಿ ಮತ್ತೆ ನೀರು ಸಂಗ್ರಹಗೊಂಡ ಕಾರಣಕ್ಕೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಯಿತು. ಕಳೆದ ಏಪ್ರಿಲ್-ಮೇ ತಿಂಗಳಿನಲ್ಲಿ ನಡೆದ ವಿಧಾನಸಭಾ ಚುನಾವಣೆ ನೆಪ ಮಾಡಿ ಇನ್ನಿತರ ಕೆಲಸವನ್ನು ಮುಂದೂಡಲಾಗಿತ್ತು. ಈಗ ಬಾಕಿ ಕಾಮಗಾರಿ ಕೈಗೆತ್ತಿಕೊಳ್ಳಲು ಅವಕಾಶ ಇದ್ದರೂ, ಹೂಳೆತ್ತುವ ಹೊಣೆ ವಹಿಸಿರುವ ಬಿಡಿಎ ಹಾಗೂ ಭದ್ರತೆ ಸಹಿತ ಇನ್ನಿತರ ಜವಾಬ್ದಾರಿ ಹೊತ್ತಿರುವ ಬಿಬಿಎಂಪಿ ಕೈಕಟ್ಟಿ ಕುಳಿತಿವೆ.
ಪ್ರಸ್ತುತ ಬಾಕಿ ಉಳಿದಿರುವ ಹೂಳೆತ್ತುವ ಕಾರ್ಯವನ್ನು ಪೂರ್ಣಗೊಳಿಸಿ ವೆಟ್ಲ್ಯಾಂಡ್ ಪ್ರದೇಶವನ್ನು ಹೊಸದಾಗಿ ನಿರ್ಮಿಸಬೇಕಿದೆ. ಕಾಲುವೆಗಳ ಒತ್ತುವರಿ ತೆರವು, ಕೆರೆಗೆ ತ್ಯಾಜ್ಯ ನೀರು ಪ್ರವೇಶಿಸದಂತೆ ಪ್ರತ್ಯೇಕ ಕಾಲುವೆ ಮಾರ್ಗವನ್ನು ನಿರ್ಮಿಸಬೇಕಿದೆ. ಈ ಕೆಲಸವನ್ನು ಪೂರ್ಣಗೊಳಿಸುವಂತೆ ಸಂಬಂಧಿಸಿದ ಸಂಸ್ಥೆಗಳಿಗೆ ಸೂಚನೆ ನೀಡುವುದಾಗಿ ಕಳೆದ ಜೂನ್ನಲ್ಲಿ ಕೆರೆ ಪ್ರದೇಶಕ್ಕೆ ಭೇಟಿ ನೀಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಪರಿಸರ ಸಚಿವ ಈಶ್ವರ್ ಖಂಡ್ರೆ ಭರವಸೆ ನೀಡಿದ್ದರು. ಆದರೆ, ಈವರೆಗೆ ಯಾವುದೇ ಕೆಲಸ ಪುನಾರಂಭಗೊಂಡಿಲ್ಲ. ಇಚ್ಛಾಶಕ್ತಿ ಕೊರತೆ ಹಾಗೂ ಮೇಲ್ವಿಚಾರಣೆ ಕೊರತೆಯಿಂದ ಕೆರೆಗಳ ಕಾಮಗಾರಿ ನನೆಗುದಿಗೆ ಬಿದ್ದಿದೆ ಎಂಬುದಾಗಿ ಸ್ಥಳೀಯರು ದೂರಿದ್ದಾರೆ.
ಎಸ್ಟಿಪಿ ಸ್ಥಾಪನೆ ನಿಧಾನ:
ಪುನಶ್ಚೇತನ ಕಾರ್ಯದ ಭಾಗವಾಗಿ ಕೆರೆಗೆ ಹರಿದುಬರುವ ಅಷ್ಟೂ ತ್ಯಾಜ್ಯನೀರನ್ನು ಶುದ್ಧೀಕರಿಸಿಯೇ ಹೊರಬಿಡಬೇಕಿದೆ. ಇದಕ್ಕಾಗಿ 110 ಎಂಎಲ್ಡಿ ಸಾಮರ್ಥ್ಯದ ಎಸ್ಟಿಪಿ ಘಟಕಗಳನ್ನು ಕೆರೆಯ ವಿವಿಧ ಭಾಗಗಳಲ್ಲಿ ಅಳವಡಿಸಬೇಕಿದೆ. ಈ ಜವಾಬ್ದಾರಿ ವಹಿಸಿರುವ ಜಲಮಂಡಳಿಯು ಮಾಲಿನ್ಯ ನಿಯಂತ್ರಣ ಮಂಡಲಿಯೊಂದಿಗೆ ಸಮನ್ವಯ ಸಾಧಿಸಿ ಎಸ್ಟಿಪಿಗಳನ್ನು ಸ್ಥಾಪಿಸಲು ಇಲ್ಲದ ನೆಪ ಹೇಳುತ್ತಿದೆ. ಈ ಕೆಲಸ ಆಗದೆ ಕೆರೆಗಳಿಗೆ ಮತ್ತೆ ಮಲಿನ ನೀರು ಹರಿದುಬರುವಂತಾಗಿದೆ.
ಕಾಮಗಾರಿ ಪೂರ್ಣಕ್ಕೆ ಬೇಕು ಗಡುವು:
ಹಾಲಿ ಕೆರೆ ಪುನಶ್ಚೇತನ ಕಾರ್ಯವನ್ನು 2024ರೊಳಗೆ ಪೂರ್ಣಗೊಳಿಸಲು ಗಡುವು ವಿಧಿಸಲಾಗಿದೆ. ಆದರೆ, ಕಾಮಗಾರಿ ನಡೆಯದ ಕಾರಣ ಬಾಕಿ ಕೆಲಸಗಳು ಪೂರ್ಣಗೊಳ್ಳಲು ಇನ್ನೂ 2-3 ವರ್ಷ ಹಿಡಿಯುವ ಸಾಧ್ಯತೆ ಇದೆ. ಹೀಗಾಗಿ ಸ್ಥಗಿತಗೊಂಡಿರುವ ಕಾಮಗಾರಿಯನ್ನು ಪುನಾರಂಭಿಸುವ ಕುರಿತು ಬೆಂಗಳೂರು ಉಸ್ತುವಾರಿ ವಹಿಸಿರುವ ಡಿಸಿಎಂ ಕೆರೆ ಅಭಿವೃದ್ಧಿ ಪಾಲುದಾರಿಕೆ ಹೊಂದಿರುವ ಸಂಸ್ಥೆಗಳ ಮುಖ್ಯಸ್ಥರ ಜತೆ ಪ್ರತ್ಯೇ ಸಭೆ ನಡೆಸಿ ಕಾಮಗಾರಿ ಪೂರ್ಣಕ್ಕೆ ಎದುರಾಗಿರುವ ಅಡ್ಡಿಯನ್ನು ನಿವಾರಿಸಬೇಕಿದೆ. ಜತೆಗೆ ಗಡುವು ವಿಧಿಸಿ ಕಾಲ ಕಾಲಕ್ಕೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ್ದಲ್ಲಿ ಪುನಶ್ಚೇತನ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂಬುದಾಗಿ ಕೆಲ ಎನ್ಜಿಒ ಪದಾಧಿಕಾರಿಗಳು ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
ಸಮಿತಿ ರಚಿಸಲು ಮರೆತ ಸರ್ಕಾರ:
2021ರಲ್ಲಿ ಎನ್ಜಿಟಿ ಕೆರೆ ಪುನಶ್ಚೇತನ ಕಾರ್ಯದ ಮೇಲೆ ನಿಗಾ ಇರಿಸಿದ್ದ ನ್ಯಾ. ಸಂತೋಷ್ ಹೆಗ್ಡೆ ನೇತೃತ್ವದ ಯೋಜನಾ ಮೇಲ್ವಿಚಾರಣಾ ಸಮಿತಿಯನ್ನು (ಪಿಎಂಸಿ) ವಿಸರ್ಜಿಸಿತು. ಆ ಸಂದರ್ಭದಲ್ಲಿ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಕೆರೆ ಮೇಲ್ವಿಚಾರಣಾ ಸಮಿತಿ ರಚಿಸುವಂತೆ ಸೂಚಿಸಿತು. ಆದರೆ, ಈವರೆಗೂ ಸಿಎಸ್ ನೇತೃತ್ವದ ಸಮಿತಿ ರಚನೆಯಾಗಿಯೇ ಇಲ್ಲ. ಹೊಸದಾಗಿ ಅಧಿಕಾರಕ್ಕೆ ಬಂದಿರುವ ಸರ್ಕಾರ ಕೂಡ ಸಮಿತಿ ರಚಿಸಲು ಆಸಕ್ತಿ ವಹಿಸಿದಂತಿಲ್ಲ. ಈ ಕಾರಣದಿಂದಾಗಿ ಪುನಶ್ಚೇತನ ಕಾರ್ಯಕ್ಕೆ ಹಣಕಾಸು ನೆರವು ಸೇರಿದಂತೆ ಉಸ್ತುವಾರಿ ವಹಿಸುವವರಿಲ್ಲದೆ ಎರಡೂ ಕೆರೆಗಳು ಮೊದಲಿ ಸ್ವರೂಪ ಪಡೆದುಕೊಳ್ಳುತ್ತಿವೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಆಗಬೇಕಿರುವ ಕಾರ್ಯ ಏನು?:
* ಕೆರೆ ಪುನಶ್ಚೇತನ ಹೊಣೆ ವಹಿಸಿರುವ ಬಿಡಿಎ, ಬಿಬಿಎಂಪಿ, ಕೆಸ್ಪಿಸಿಬಿ, ಜಲಮಂಡಳಿ ಮಧ್ಯೆ ಸಮನ್ವಯ ಸಾಧಿಸುವುದು.
* ಹೂಳೆತ್ತುವ ಕಾರ್ಯ ಪೂರ್ಣಗೊಳಿಸಿದ ಬಳಿಕ ವೆಟ್ಲ್ಯಾಂಡ್ ಅಭಿವೃದ್ಧಿಪಡಿಸುವುದು.
* ಬಾಕಿ ಉಳಿದಿರುವ ಕೆರೆ, ಕಾಲುವೆಗಳ ಒತ್ತುವರಿ ತೆರವುಗೊಳಿಸುವುದು.
* ಕೆರೆಗೆ ತ್ಯಾಜ್ಯನೀರು ಹರಿಯದಂತೆ ಕಾಲುವೆಯನ್ನು ಅಗಲೀಕರಣಗೊಳಿಸುವುದು.
* ಕೆರೆ ಸುತ್ತ ತ್ಯಾಜ್ಯ ಸುರಿಯುವಿಕೆ ತಡೆಗೆ 24/7 ಭದ್ರತೆ, ಕೆಟ್ಟಿರುವ ಸಿಸಿಟಿವಿ ಕ್ಯಾಮರಾ ದುರಸ್ತಿ ಮಾಡುವುದು.
* ಅಭಿವೃದ್ಧಿ ಕಾರ್ಯದಲ್ಲಿ ಸ್ಥಳೀಯರು, ಎನ್ಜಿಒ ಸಹಕಾರ ಪಡೆದು ನಾಗರಿಕ ಸಮಿತಿ ರಚಿಸುವುದು.
ವರ್ತೂರು-ಬೆಳ್ಳಂದೂರು ಕೆರೆಗಳ ಅಭಿವೃದ್ಧಿ ಅರ್ಧಕ್ಕೆ ನಿಂತಿರುವುದರಿಂದ ಮತ್ತೆ ಮಲಿನವಾಗುತ್ತಿವೆ. ಎನ್ಜಿಟಿ ನೀಡಿದ್ದ ನಿರ್ದೇಶನ ಪಾಲನೆಯಾಗದೆ ಮೂಲ ಆಶಯವೇ ಮಣ್ಣುಗೂಡುವಂತಾಗಿದೆ. ಕೆರೆ ಪುನಶ್ಚೇತನ ಆಗಿದ್ದಲ್ಲಿ ಸುತ್ತಲಿನ ಅಂತರ್ಜಲ ಮಟ್ಟ ವೃದ್ಧಿಯಾಗುವ ಜತೆಗೆ ಜೀವಿವೈವಿಧ್ಯ ತಾಣವಾಗುತ್ತಿತ್ತು. ಈಗ ಮತ್ತೆ ಮಲೀನವಾಗುವತ್ತ ಹೊರಳಿದ್ದು, ಬಾಕಿ ಕಾಮಗಾರಿಯನ್ನು ಶೀಘ್ರ ಆರಂಭಿಸಬೇಕು.
- ಜಗದೀಶ್ ರೆಡ್ಡಿ, ಸಾಮಾಜಿಕ ಕಾರ್ಯಕರ್ತ, ವರ್ತೂರು