

ಹುಣಸೂರು: ತಾಲೂಕಿನ ಧರ್ಮಾಪುರ ಗ್ರಾಮದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಜಿ.ಡಿ.ಹರೀಶ್ ಗೌಡ ಗುರುವಾರ ಭೂಮಿಪೂಜೆ ನೆರವೇರಿಸಿದರು.
ಸರ್ಕಾರದ ಅನುದಾನಕ್ಕಾಗಿ ಕಾಯದೆ ವೈಯಕ್ತಿಕವಾಗಿ ನೆರವು ನೀಡುವ ಮೂಲಕ ಜನಸೇವೆ ಮಾಡಲಾಗುತಿದೆ. ಇತ್ತೀಚೆಗೆ ಧರ್ಮಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ರೈತರಿಗೆ ಸಾಲ ಬಿಡುಗಡೆ ಬಗ್ಗೆ ಡಿಸಿಸಿ ಬ್ಯಾಂಕ್ ಮುಂಭಾಗ ರೈತರೊಂದಿಗೆ ಪ್ರತಿಭಟನೆ ನಡೆಸಿ ಸಾಲ ಕೊಡಿಸುವ ಯಶಸ್ವಿಯಾಗಿದ್ದೇನೆ ಎಂದು ಜಿ.ಡಿ.ಹರೀಶ್‌ಗೌಡ ಹೇಳಿದರು.
ಧರ್ಮಾಪುರ ಮುರಾರ್ಜಿ ವಸತಿ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ದಿಗಾಗಿ 10ಲಕ್ಷ ರೂ., ಮಾರಮ್ಮ ದೇವಾಲಯದ ಗೋಪುರ ನಿರ್ಮಾಣಕ್ಕಾಗಿ 5 ಲಕ್ಷ ರೂ., ಈಶ್ವರ ದೇವಾಲಯದಲ್ಲಿ ಬಸವ ನಿರ್ಮಾಣಕ್ಕೆ 2.50 ಲಕ್ಷ ರೂ., ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕಾಗಿ ಗ್ರಾಪಂ ವತಿಯಿಂದ 4 ಲಕ್ಷ ರೂ. ಹಾಗೂ ಶಾಸಕರ ನಿಧಿಯಿಂದ ಮೂರು ಲಕ್ಷ ರೂ .ಮತ್ತು ಗ್ರಾಮದ ಸಿಸಿ ರಸ್ತೆಯನ್ನು 30 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಈ ಹಿಂದೆ ಧರ್ಮಾಪುರ ಗ್ರಾಮದ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು 10 ಲಕ್ಷ ರೂ. ಅನುದಾನ ಬಂದಿತ್ತು. ಈಗ 50 ಲಕ್ಷ ರೂ. ನೀಡಲಾಗಿದೆ. ಗ್ರಾಮಸ್ಥರ ಬೇಡಿಕೆಯಂತೆ ಇನ್ನೂ 75ಲಕ್ಷ ರೂ. ಅನುದಾನ ಸೇರಿ ಒಟ್ಟು 1.35 ಕೋಟಿ ರೂ. ವೆಚ್ಚದಲ್ಲಿ ಭವನ ನಿರ್ಮಾಣ ಮಾಡಲು ಬೇಕಾದ ಅನುದಾನ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರತಿ ತಿಂಗಳ ಮೊದಲ ಮಂಗಳವಾರ ಹುಣಸೂರು ತಾಲೂಕು ಕಚೇರಿಯಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಇರುತ್ತೇನೆ. ಸಾಗುವಳಿ ಸೇರಿದಂತೆ ಮತ್ತಿತರ ಕೆಲಸ ಕಾರ್ಯಗಳಿದ್ದರೆ ಸಾರ್ವಜನಿಕರು ಭೇಟಿ ಮಾಡಬಹುದಾಗಿದೆ ಎಂದರು.
ಇದೇ ವೇಳೆ ತೋಟದ ಮನೆಗಳಿಗೆ ವಿದ್ಯುತ್ ಇಲ್ಲದೆ ಸಮಸ್ಯೆಯಾಗುತ್ತಿದೆ ಎಂದು ನಾಡಪ್ಪನಹಳ್ಳಿ ಮತ್ತು ಧರ್ಮಾಪುರ ಗ್ರಾಮದ ಜನರು ದೂರಿದಾಗ, ಶಾಸಕರು ಇಇಗೆ ದೂರವಾಣಿ ಮೂಲಕ ಮಾತನಾಡಿ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸಲು ಬೇಕಾದ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಧರ್ಮಾಪುರ-ಬಿಳಿಕೆರೆ ಮುಖ್ಯರಸ್ತೆಯಲ್ಲಿ ಚರಂಡಿ ಇಲ್ಲದೆ ರಸ್ತೆಯಲ್ಲೆ ಮತ್ತು ಮೂಡಲ ಕೆರೆಗೆ ಕೊಳಚೆ ನೀರು ಹರಿದು ಸಮಸ್ಯೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದಾಗ, ಲೋಕೋಪಯೋಗಿ ಇಲಾಖೆ ಎಇಇಗೆ ಮಾತನಾಡಿ ಅಂದಾಜು ವೆಚ್ಚ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ವಿ.ಮಹದೇವ್ ಮಾತನಾಡಿದರು. ಪಿಡಿಒ ರೂಪಾ, ಗ್ರಾಮ ಲೆಕ್ಕಿಗ ಕುಮಾರ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸತೀಶ್ ಪಾಪಣ್ಣ, ಗ್ರಾಪಂ.ಸದಸ್ಯರಾದ ಪುನೀತಾಲೋಕೇಶ್, ತೋಳಸಮ್ಮ, ಗೌರಮ್ಮ, ನಾಗಮಣ್ಣಿ, ಗ್ರಾ.ಪಂ.ಮಾಜಿ ಅಧ್ಯಕ್ಷ ಆರ್.ವಿಶ್ವನಾಥ್, ಮಲ್ಲೇಶ್, ಮುಖಂಡರಾದ ಪುಟ್ಟಮಾದಯ್ಯ, ಎಂ.ರಮೇಶ್, ರಾಮು, ಚಲುವಯ್ಯ, ನಿಂಗರಾಜು, ದಾಸನಾಯಕ, ಮಹದೇವ್, ಶಂಕರೇಗೌಡ, ಸೋಮಣ್ಣ, ಬೀರಪ್ಪ, ಸತೀಶ್, ಗವಿನಾಯಕ, ಕೃಷ್ಣನಾಯಕ ಸಿದ್ದೇಗೌಡ, ನಾಗೇಂದ್ರ, ಮೂರ್ತಿ, ಜವರೇಗೌಡ ಹಾಜರಿದ್ದರು.
ಗ್ಯಾರಂಟಿಯಿಂದ ರಾಜ್ಯ ದಿವಾಳಿಯಾಗುತ್ತಿದೆ: ಗ್ಯಾರಂಟಿ ಹೆಸರಿನಲ್ಲಿ ಅಭಿವೃದ್ಧಿಗೆ ಅನುದಾನ ನೀಡದಿರುವುದರಿಂದ ರಾಜ್ಯ ದಿವಾಳಿಯತ್ತ ಸಾಗುತ್ತಿದೆ. ಸ್ವಪಕ್ಷದ ಶಾಸಕರೇ ಅನುದಾನವಿಲ್ಲದೆ ಬೇಸತ್ತಿ ಕೈ ಚೆಲ್ಲಿ ಏನು ಮಾಡಲಾಗದ ಪರಿಸ್ಥಿತಿಯಲ್ಲಿದ್ದಾರೆ. ಇದು ಹೀಗೆ ಮುಂದುವರಿದರೆ ರಾಜ್ಯದ ಆರ್ಥಿಕ ಸ್ಥಿತಿ ದುರಂತದತ್ತ ಸಾಗಲಿದೆ ಎಂದು ಶಾಸಕ ಹರೀಶ್‌ಗೌಡ ಆತಂಕ ವ್ಯಕ್ತಪಡಿಸಿದರು.