

ಕಲಾದಗಿ: ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಮುಖ್ಯಮಂತ್ರಿಗಳು ಕೋಟಿ ಕೋಟಿ ಲೆಕ್ಕದಲ್ಲಿ ಅನುದಾನ ಕೊಡುತ್ತಿದ್ದಾರೆ. ಆ ಎಲ್ಲ ಅಭಿವೃದ್ಧಿ ಕೆಲಸಗಳು ನಮ್ಮ ಜಿಲ್ಲೆಯಲ್ಲಿ ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ನಡೆಯುತ್ತಿವೆ. ಹಾಗಾದರೆ ಸರ್ಕಾರಕ್ಕೆ ಇಷ್ಟು ಕೋಟಿ ಹಣ ಎಲ್ಲಿಂದ ಬಂತು?ಎಂದು ಪ್ರಶ್ನಿಸುವುದರ ಮೂಲಕ ಗ್ಯಾರಂಟಿಗಳಿಂದ ಸರ್ಕಾರದಲ್ಲಿ ಹಣ ಇಲ್ಲ ಎಂದು ಟೀಕೆ ಮಾಡುವವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಪ್ರತ್ಯುತ್ತರ ನೀಡಿದ್ದಾರೆ.
ದೇವನಾಳದಲ್ಲಿ ಕರ್ನಾಟಕ ನೀರಾವರಿ ನಿಗಮದಡಿ 106.63 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅನವಾಲ ಏತ ನೀರಾವರಿ ಯೋಹನೆಯ ಮೊದಲ ಹಂತದ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ತಮ್ಮ ಅಧಿಕಾರದ ಅವಧಿಯಲ್ಲಿ ಜನಪರ ಕೆಲಸಗಳನ್ನು ಮಾಡದಿದ್ದವರೂ ನಮ್ಮ ಸರ್ಕಾರದ ಜನಪ್ರಿಯತೆ ಸಹಿಸಿಕೊಳ್ಳದೆ ಟೀಕೆ ಮಾಡುತ್ತಿರುವುದು ವಿಪರ್ಯಾಸ. ವಿರೋಧ ಪಕ್ಷದವರು ಮಾಡುತ್ತಿರುವ ಟೀಕೆಗಳಿಗೆ ಯಾವುದೆ ಸ್ಪಷ್ಟತೆಯಿಲ್ಲ ಎಂದು ಕುಟುಕಿದರು.
ಪ್ರತಿ ಜಾತಿಯಲ್ಲಿ ಹಿಂದುಳಿದವರನ್ನು ಗುರುತಿಸಿ ಅವರಿಗೆ ಸಹಾಯ ಮಾಡಲು ಜಾತಿಗಣತಿ ವರದಿಯಿದೆ. ವಿರೋಧ ಪಕ್ಷದವರು ಇದನ್ನೂ ತಿರುಚಿ ಮಾತನಾಡುತ್ತಿದ್ದಾರೆ. ಯಾರು ಏನೇ ಅಂದರೂ ಜಾತಿ ಗಣತಿ ವರದಿ ಜಾರಿಗೊಳಿಸುತ್ತೇವೆ ಎಂದರು.
ರಾಜಕಾರಣಿಗಳು ಅಧಿಕಾರ ಸಿಕ್ಕಾಗ ದೇವರಾಜ ಅರಸು ಹಾಗೂ ಸಿದ್ದರಾಮಯ್ಯ ಅವರಂತೆ ಜನಪರ ಕೆಲಸಗಳನ್ನು ಮಾಡಿ ತಮ್ಮ ಹೆಜ್ಜೆಗುರುತುಗಳನ್ನು ಉಳಿಸಬೇಕು. ಅಂಥಹವರ ದಾರಿಯಲ್ಲಿ ಜೆ.ಟಿ. ಪಾಟೀಲರು ಸಾಗುತ್ತಿರುವುದು ಪ್ರಶಂಸನೀಯ ಎಂದರು.
ಶಾಸಕ ಜೆ.ಟಿ. ಪಾಟೀಲ ಮಾತನಾಡಿ, ಸದರಿ ಯೋಜನೆಯಿಂದ ಒಟ್ಟು 35877 ಎಕರೆ ಪ್ರದೇಶ ನೀರಾವರಿಯಾಗುತ್ತಿರುವುದು ಸಂತಸವಾಗಿದೆ ಎಂದರು.
ದೇವನಾಳ ಗ್ರಾಪಂ ಅಧ್ಯಕ್ಷ ಅಶೋಕ ದೇವನಾಳ, ಮುಖಂಡರಾದ ಎಂ.ಬಿ. ಸೌದಾಗರ, ಪಾಂಡು ಪೊಲೀಸ್, ಸಂಗಣ್ಣ ಮುಧೋಳ, ಬಸವರಾಜ ಸಂಶಿ, ಆನಂದ ಕಿವಡಿ, ಗಿರೀಶ ನಾಡಗೌಡ, ಆನಂದ ಹೊನ್ನಪ್ಪಗೋಳ ಕರ್ನಾಟಕ ನೀರಾವರಿ ನಿಗಮದ ಹಿರಿಯ ಅಧಿಕಾರಿಗಳಾದ ಎಂ.ಎಚ್. ತೋಟಗೇರ, ಮಹೇಶ ಅಂಗಡಿ ಮತ್ತಿತರರಿದ್ದಾರೆ.