ಕಾಗಿನೆಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ

JDS Taluku Prsident binnal
Published on

ಬ್ಯಾಡಗಿ:  ತಾಲೂಕಿನ ಕಾಗಿನೆಲೆ ಗ್ರಾಮದಲ್ಲಿ ರಸ್ತೆ, ಶುದ್ಧ ನೀರು, ಆಸ್ಪತ್ರೆ ಸೇರಿದಂತೆ ಮೂಲ ಸೌಲಭ್ಯ ಕೊರತೆಯಿದ್ದು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಜೆಡಿಎಸ್ ತಾಲೂಕಾಧ್ಯಕ್ಷ ಮೋಹನ ಬಿನ್ನಾಳ ಆರೋಪಿಸಿದರು.

ಗುರುವಾರ ಕಾನಿಪ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಪ್ರಸಿದ್ಧ ಕ್ಷೇತ್ರವಾಗಿರುವ ಕಾಗಿನೆಲೆ ಕನಕದಾಸರ ಕರ್ಮಭೂಮಿಯಾಗಿದ್ದು, 15 ವರ್ಷದ ಹಿಂದೆ ಕಾಗಿನೆಲೆ ಪ್ರಾಧಿಕಾರ ರಚಿಸಿ ನೂರಾರು ಕೋ.ರೂ. ವೆಚ್ಚದಲ್ಲಿ ಸಂಪೂರ್ಣ ಅಭಿವೃದ್ಧಿ ಕೈಗೊಳ್ಳಲಾಗಿದೆ. ಆದರೆ, ಗ್ರಾಮದಲ್ಲಿ ಮೂಲ ಸೌಲಭ್ಯಗಳಿಲ್ಲ. ಈ ಕುರಿತು ಹೋರಾಟ ನಡೆಸಿದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ಒಟ್ಟು 6 ಸಾವಿರ ಜನಸಂಖ್ಯೆಯಿದ್ದು, ಶುದ್ಧ ನೀರು ಕುಡಿಯಲು ಸಾಧ್ಯವಾಗುತ್ತಿಲ್ಲ. ಒಂದೇ ನೀರಿನ ಘಟಕವಿದೆ. ಕಾಗಿನೆಲೆ ವಿಶ್ವಪ್ರಸಿದ್ದಿ ಸ್ಥಾನ ಪಡೆದರೂ ಇಂದಿಗೂ ಬಸ್ ನಿಲ್ದಾಣವಿಲ್ಲ. ಗ್ರಾಮದ ಸುತ್ತಲೂ ಕೆರೆಗಳನ್ನು ಒತ್ತುವರಿ ಮಾಡಲಾಗಿದೆ. ಎಲ್ಲಿ ನೋಡಿದರೂ ಚರಂಡಿಗಳು ಗಬ್ಬುನಾರುತ್ತಿದ್ದು, ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತೀವ್ರ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದರು.

ಮಾಜಿ ಸೈನಿಕ ಆಸೀಫ್​ಅಲಿ ಮತ್ತಿಹಳ್ಳಿ ಮಾತನಾಡಿ, ಕಾಗಿನೆಲೆ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಸಾವಿರ ಜನರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು, ಒಬ್ಬರೇ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ರಾತ್ರಿ ವೈದ್ಯರಿರುವುದಿಲ್ಲ, ಕೇವಲ ಆರೋಗ್ಯ ಸಿಬ್ಬಂದಿ ಮೇಲೆ ಎಲ್ಲವೂ ನಡೆಯುತ್ತಿದ್ದು, ತೊಂದರೆಯಾದಲ್ಲಿ ಯಾರು ಹೊಣೆ? ಇಲಾಖೆ ಕಳಿಸಿದ ಔಷಧಗಳ ವಿತರಣೆ ಸಮರ್ಪವಾಗಿಲ್ಲ. ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಈ ಕುರಿತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾ ಹಾಗೂ ತಾಲೂಕು ಜೆಡಿಎಸ್ ಘಟಕದಿಂದ ಗ್ರಾಪಂ ಕಾರ್ಯಾಲಯ ಎದುರು ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ಮೋಹಿನ್ ಮುಲ್ಲಾ, ಮಹಬೂಬಲಿ ಎಲಿಗಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net