

ಗುಂಡ್ಲುಪೇಟೆ: ಮುಖ್ಯಮಂತ್ರಿ ನೀಡಿರುವ 25 ಕೋಟಿ ರೂ. ವಿಶೇಷ ಅನುದಾನ ಬಳಸಿಕೊಂಡು ತಾಲೂಕಿನ 42 ಆಯ್ದ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮಾಹಿತಿ ನೀಡಿದರು.
ಶನಿವಾರ ತಾಲೂಕಿನ ಹಂಗಳ ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಿದ್ದ ಕೂಸಿನ ಮನೆ ಉದ್ಘಾಟಿಸಿ ಮಾತನಾಡಿದರು. ಕೆಲಸ ಕಾರ್ಯಕ್ಕೆ ಹೋಗುವ ಕಾರ್ಮಿಕರ ಪುಟ್ಟ ಮಕ್ಕಳ ಪಾಲನೆಗೆ ಕೂಸಿನ ಮನೆ ಆರಂಭಿಸಲಾಗುತ್ತಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಹಂಗಳ ಗ್ರಾಮದಲ್ಲಿ 60 ಲಕ್ಷ ರೂ. ವೆಚ್ಚದಲ್ಲಿ ಮೂಲಸೌಕರ್ಯ ಕಲ್ಪಿಸಲಾಗುವುದು. ಬಸವ ಭವನ, ವಾಲ್ಮೀಕಿ ಭವನ, ಬಾಬು ಜಗಜೀವನರಾಮ್ ಭವನ ಮುಂತಾದ ಸಮುದಾಯ ಭವನಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.
ತಹಸೀಲ್ದಾರ್ ರಮೇಶ್ ಬಾಬು, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಗ್ರಾಪಂ ಅಧ್ಯಕ್ಷೆ ರೂಪಾ ಪಾಪಣ್ಣ, ಉಪಾಧ್ಯಕ್ಷ ನಾಗರಾಜು, ಅಭಿವೃದ್ಧಿ ಅಧಿಕಾರಿ ಶಾಂತಮಲ್ಲಪ್ಪ, ಇತರರು ಇದ್ದರು.