ಆನಸೋಸಲು ಗ್ರಾಮ ಕ್ಷೇತ್ರದಲ್ಲೇ ಮಾದರಿ: ಶಾಸಕ ರವಿಕುಮಾರ್ ಗಣಿಗ ಮೆಚ್ಚುಗೆ

Development work costing Rs 35 lakh started Mandya
Published on

ಮಂಡ್ಯ: ರಾಜಕೀಯವನ್ನು ತೊರೆದು ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಒಗ್ಗಟ್ಟಾಗಿರುವ ಆನಸೋಸಲು ಗ್ರಾಮದ ಜನರು ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಮಾದರಿಯಾಗಿದ್ದಾರೆ ಎಂದು ಶಾಸಕ ರವಿಕುಮಾರ್ ಗಣಿಗ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕಿನ ಆನಸೋಸಲು ಗ್ರಾಮದಲ್ಲಿ 35 ಲಕ್ಷ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಚುನಾವಣೆ ಸಮಯದಲ್ಲಿ ಕೇವಲ 15 ದಿನ ಮಾತ್ರ ರಾಜಕೀಯ ಮಾಡಬೇಕು. ಆನಂತರ ಗ್ರಾಮದ ಅಭಿವೃದ್ಧಿಗೆ ಪಕ್ಷಾತೀತವಾಗಿ ಒಂದಾಗಬೇಕು. ಈ ನಿಟ್ಟಿನಲ್ಲಿ ಮುನ್ನಡೆಯುತ್ತಿರುವ ಆನಸೋಸಲು ಮಾದರಿ ಗ್ರಾಮವಾಗಿದೆ. ರಾಜಕೀಯ, ಕಿತ್ತಾಟ ಯಾವುದೂ ಬೇಡ. ನನ್ನನ್ನೂ ಗೆಲ್ಲಿಸಿದ್ದೀರಿ. ಐದು ವರ್ಷ ಅಧಿಕಾರವಿರುತ್ತದೆ. ನಿಮ್ಮ ಗ್ರಾಮಕ್ಕೆ ಆಗಬೇಕಿರುವ ಕೆಲಸವನ್ನು ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಐದು ಲಕ್ಷ ರೂ ವೆಚ್ಚದಲ್ಲಿ ಗ್ರಾಮದ ಮಾರಮ್ಮ ದೇವಿ ದೇವಸ್ಥಾನ ಅಭಿವೃದ್ಧಿ, 10 ಲಕ್ಷ ರೂ ವೆಚ್ಚದಲ್ಲಿ ಎರಡು ರಸ್ತೆ ಕಾಮಗಾರಿ, 20 ಲಕ್ಷ ರೂ ವೆಚ್ಚದಲ್ಲಿ ಸ್ಮಶಾನ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಇದಲ್ಲದೆ ಗ್ರಾಮದಲ್ಲಿ 10 ಲಕ್ಷ ರೂ ವೆಚ್ಚದಲ್ಲಿ ಗ್ರಂಥಾಲಯ ಕಾಮಗಾರಿ ನಡೆಯುತ್ತಿದೆ. ಒಟ್ಟು ಆನಸೋಸಲಿನಲ್ಲಿ 45 ಲಕ್ಷ ರೂ ವೆಚ್ಚದ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಒಟ್ಟಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 38 ಕೋಟಿ ರೂ ವೆಚ್ಚದಲ್ಲಿ ಕೆಲಸ ನಡೆಯುತ್ತಿದೆ. ಇದಲ್ಲದೆ ಕಾವೇರಿ ನೀರಾವರಿ ನಿಗಮದಿಂದ 120 ಕೋಟಿ ರೂ ವೆಚ್ಚದಲ್ಲಿ ನಾಲೆಗಳ ಆಧುನೀಕರಣ ಕೆಲಸ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಚಿಕ್ಕಬಳ್ಳಿ ಕೆರೆಯ ಅಭಿವೃದ್ಧಿಗೆ ಇನ್ನೂ ಎರಡು ತಿಂಗಳಲ್ಲಿ ಅನುದಾನ ಬಿಡುಗಡೆಗೊಳ್ಳಲಿದೆ. ವಿರೋಧ ಪಕ್ಷದವರು ಅಭಿವೃದ್ಧಿಗೆ ಸರ್ಕಾರದಲ್ಲಿ ಹಣವಿಲ್ಲ ಎನ್ನುತ್ತಾರೆ. ಆದರೆ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ನಿರಂತರವಾಗಿ ನಡೆಯುತ್ತಿದೆ. ಸುಮ್ಮನೆ ಹಣ ಘೋಷಣೆ ಮಾಡಿ ನಾನು ಹೋಗುತ್ತಿಲ್ಲ. ಎಲ್ಲ ಗ್ರಾಮದಲ್ಲಿಯೂ ಕೆಲಸ ನಡೆಯುತ್ತಿರುವುದು ಕಾಣುತ್ತಿದೆ. ಇನ್ನೂ 800 ಕೋಟಿ ರೂ ವೆಚ್ಚದ ಕಾಮಗಾರಿ ಮಾಡಲು ಅನುದಾನವಿದೆ ಎಂದು ಹೇಳಿದರು.

ಮಂಡ್ಯ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಮಾಜಿ ಸದಸ್ಯ ಚಿಕ್ಕಬಳ್ಳಿ ಕೃಷ್ಣ , ಜಿಲ್ಲಾ ಕಾಂಗ್ರೆಸ್ ವಕ್ತಾರ ದ್ಯಾವಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ದಯಾನಂದ, ಕೃಷ್ಣ, ಸುಮಾ ಲೋಕೇಶ್, ಮಾರಮ್ಮ ಸೇವಾ ಸಮಿತಿ ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ರಾಜಣ್ಣ, ಹಲ್ಲೆಗೆರೆ ಸೊಸೈಟಿ ಮಾಜಿ ಅಧ್ಯಕ್ಷ ಎ.ಎಸ್.ದೇವರಾಜು, ಮುಖಂಡರಾದ ದ್ಯಾಪಸಂದ್ರ ಉಮೇಶ್, ಶ್ರೀಕಾಂತ್, ಮಹೇಂದ್ರ, ಡೇರಿ ಅಧ್ಯಕ್ಷ ರಾಕೇಶ್ ಇತರರಿದ್ದರು. ಇದೇ ಸಂದರ್ಭದಲ್ಲಿ ಚಿಕ್ಕಬಳ್ಳಿಯಲ್ಲಿ ಕೆರೆಕೋಡಿ ಕಾಮಗಾರಿ, ಮಾಯಪ್ಪನಹಳ್ಳಿ ಕಾಲುವೆ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ರವಿಕುಮಾರ್ ಗಣಿಗ ಪರಿಶೀಲಿಸಿದರು.

ಪ್ರತಿ ಮನೆಯಿಂದಲೂ ಇಟ್ಟಿಗೆ ಸಂಗ್ರಹ

ಪುರಾಣ ಪ್ರಸಿದ್ಧ ಕೆರಗೋಡು ಪಂಚಲಿಂಗೇಶ್ವರ ದೇವಸ್ಥಾನವನ್ನು ಐದು ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಈಗಾಗಲೇ ನೀಲನಕ್ಷೆಯೂ ಸಿದ್ಧವಾಗಿದೆ. ಇನ್ನೊಂದೆರೆಡು ತಿಂಗಳಲ್ಲಿ ಕಾಮಗಾರಿಗೂ ಚಾಲನೆ ನೀಡಲಾಗುವುದು. ಆಗ ಪ್ರತಿ ಮನೆಯಿಂದಲೂ ಒಂದೊಂದು ಇಟ್ಟಿಗೆಯನ್ನು ಸಂಗ್ರಹಿಸಲಾಗುವುದು. ಒಟ್ಟಾರೆ ಎಲ್ಲರೂ ಸೇರಿ ಪಂಚಲಿಂಗೇಶ್ವರ ದೇವಸ್ಥಾನವನ್ನು ಅದ್ದೂರಿಯಾಗಿ ನಿರ್ಮಾಣ ಮಾಡೋಣ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net