

ಹುಬ್ಬಳ್ಳಿ : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಲೇ ಇವೆ. ರಾಜ್ಯದ ಪ್ರತಿ ಪ್ರಜೆಗೂ ಸರ್ಕಾರದ ಯೋಜನೆ ತಲುಪಿಸುವುದೇ ನಮ್ಮ ಸರ್ಕಾರದ ಉದ್ದೇಶ ಎಂದು ಶಾಸಕ, ರಾಜ್ಯ ಸ್ಲಮ್ ಬೋರ್ಡ್ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೇಳಿದರು.
ಇಲ್ಲಿನ ಹು-ಧಾ ಪೂರ್ವ ವಿಧಾನಸಭೆ ಕ್ಷೇತ್ರದ 62ನೇ ವಾರ್ಡ್ನ ಮಂಟೂರ ರಸ್ತೆ ಹೊಸ ಕನ್ಯಾನಗರದಲ್ಲಿ 3.20ಕೋಟಿ ರೂ. ಅನುದಾನದಲ್ಲಿ ರಸ್ತೆ, ಒಳಚರಂಡಿ, ಸಿಸಿ ಪೇವಿಂಗ ಸಮಗ್ರ ಅಭಿವೃದ್ಧಿ ಕಾಮಗಾರಿ, ಸೆಟ್ಲಮೆಂಟ್ ಗೊಲ್ಲರ ಕಾಲನಿಯಲ್ಲಿ 1.5 ಕೋಟಿ ರೂ.ದಲ್ಲಿ ಸಮುದಾಯ ಭವನ, ನೇಕಾರ ನಗರದಲ್ಲಿ 1.5ಕೋಟಿ ರೂ. ವೆಚ್ಚದಲ್ಲಿ ಬಸವೇಶ್ವರ ದೇವಸ್ಥಾನ, ಬನಶಂಕರಿ ದೇವಸ್ಥಾನ ಮತ್ತು ಕಾಳಿಕಾದೇವಿ ದೇವಸ್ಥಾನದಲ್ಲಿ ಸಮುದಾಯ ಭವನ ನಿಮಾಣ ಕಾಮಗಾರಿ ಸೇರಿ ಒಟ್ಟು 6.20 ಕೋಟಿ ರೂ. ಕೊಳಗೇರಿ ಅಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಮತ್ತು 78ನೇ ವಾರ್ಡ್ನ 15ನೇ ಹಣಕಾಸು ಯೋಜನೆಯಡಿ ಯುಜಿಡಿ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರ ಚುನಾವಣೆ ವೇಳೆಯಲ್ಲಿ ನೀಡಿದ ಭರವಸೆಯಂತೆ 10 ಕೆಜಿ ಪಡಿತರ ಧಾನ್ಯ ಸೇರಿದಂತೆ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಆದರೆ, ವಿರೋಧ ಪಕ್ಷಗಳು ಸರ್ಕಾರದ ದಕ್ಷ ಆಡಳಿತ ಸಹಿಸಲಾಗದೆ ಭ್ರಮನಿರಸನಗೊಂಡಿವೆ ಎಂದು ಟೀಕಿಸಿದರು.
ತಲಾ ಆದಾಯದಲ್ಲಿ ಇಡೀ ದೇಶದಲ್ಲಿ ಕನ್ನಡಿಗರೇ ಮೊದಲ ಸ್ಥಾನದಲ್ಲಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ಆರ್ಥಿಕ ಸಾಧನೆ. ತೆರಿಗೆ ಪಾವತಿಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಇದು ನಮ್ಮ ಸರ್ಕಾರದ ಜಾತ್ಯತೀತ ಸಾಧನೆ. ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದೆ. ಕೊಟ್ಟ ಮಾತಿನಂತೆ ಮುಂದಿಯೂ ನಡೆದುಕೊಳ್ಳುತ್ತೇವೆ. ಮುಂದಿನ ಬಾರಿಯೂ ನಮ್ಮ ಸರ್ಕಾರವನ್ನು ಗೆಲ್ಲಿಸಿ ಯೋಜನೆ ಮುಂದುವರೆಸುತ್ತೇವೆ ಎಂದರು.
ಮಹಾನಗರ ಪಾಲಿಕೆ ಸದಸ್ಯರು, ಸ್ಲಮ್ ಬೋರ್ಡ್ ಅಧಿಕಾರಿಗಳು, ಕಾಂಗ್ರೆಸ್ ಮುಖಂಡರು ಹಾಗೂ ಇತರರು ಇದ್ದರು.