ಪಂಚ ರೈಲು ನಿಲ್ದಾಣಗಳಲ್ಲಿ ಅಭಿವೃದ್ಧಿ ಪರ್ವ : ಪ್ಲಾಟ್ ಫಾರ್ಮ್ ಎತ್ತರಿಸುವ ಕಾರ್ಯ: ಶೆಲ್ಟರ್ ನಿರ್ಮಾಣ

New Project (11)
Published on

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ

ಮಂಗಳೂರು- ಬೆಂಗಳೂರು ರೈಲು ಮಾರ್ಗದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣ ಸಮೀಪದ ಸ್ಥಳೀಯ ಐದು ರೈಲು ನಿಲ್ದಾಣಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದೆ. ಇದರೊಂದಿಗೆ ರೈಲು ನಿಲ್ದಾಣಗಳಲ್ಲಿನ ಬಹುಕಾಲದ ಬೇಡಿಕೆ ಈಡೇರಿದಂತಾಗಿದ್ದು, ಗ್ರಾಮೀಣ ಜನತೆಯ ಬಹುಕಾಲದ ಕನಸು ನನಸಾಗಿದೆ.

ಅಭಿವೃದ್ಧಿ ಕಾರ್ಯ: ಈ ಐದು ರೈಲು ನಿಲ್ದಾಣಗಳಲ್ಲಿ 250 ಮೀಟರ್ ಉದ್ದದವರೆಗೆ ಪ್ಲಾಟ್‌ಫಾರ್ಮ್ ಎತ್ತರಿಸುವ ಕಾಮಗಾರಿ ನಡೆಸಲಾಗಿದೆ. ಇದರಿಂದ ಪ್ರಯಾಣಿಕರಿಗೆ ರೈಲು ಹತ್ತಲು ಮತ್ತು ಇಳಿಸಲು ಅನುಕೂಲಕರವಾಗಿದೆ. ರೈಲು ನಿಲ್ದಾಣಗಳಲ್ಲಿ ಶೆಲ್ಟರ್ ನಿರ್ಮಾಣ ಕಾಮಗಾರಿ ನಡೆಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ನಿರ್ಮಿಸಲಾಗಿದೆ. ಶೆಲ್ಟರ್ ಕೆಳಗಡೆ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ. ಸ್ಥಳೀಯ ರೈಲು ನಿಲ್ದಾಣಗಳಲ್ಲಿ ಮೂಲಸೌಕರ್ಯ ಕಲ್ಪಿಸುವ ಮೂಲಕ ಈ ಭಾಗದ ಜನರ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ.

ಡಬಲ್ ಧಮಾಕ: ಸ್ಥಳೀಯ ರೈಲು ನಿಲ್ದಾಣಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಮೂಲಕ ಈ ಭಾಗದ ಜನರಹಲವು ವರ್ಷಗಳ ಬೇಡಿಕೆ ಈಡೇರಿಸಲಾಗಿದೆ. ಇನ್ನೊಂದೆಡೆ ಮಂಗಳೂರು- ಸುಬ್ರಹ್ಮಣ್ಯ ನಡುವೆ ಬೆಳಗ್ಗೆ, ಸಂಜೆ ಪ್ಯಾಸೆಂಜರ್ ರೈಲು ಓಡಾಟ ಆರಂಭವಾಗಿದೆ. ಈ ಎರಡೂ ಬೇಡಿಕೆ ಹಲವು ವರ್ಷಗಳಿಂದ ಇದ್ದು, ಇದೀಗ ಎರಡೂ ಬೇಡಿಕೆ ಒಟ್ಟೊಟ್ಟಿಗೆ ಈಡೇರಿ ಜನತೆಗೆ ಡಬಲ್ ಧಮಾಕ ಪಡೆದ ಖುಷಿ ಹೊಂದಿದ್ದಾರೆ.

4.50 ಕೋಟಿ ರೂ. ಕಾಮಗಾರಿ

ಕಡಬ ತಾಲೂಕಿನ ಬಜಕೆರೆ, ಕೋಡಿಂಬಾಳ, ಎಡಮಂಗಲ, ಕಾಣಿಯೂರು, ನರಿಮೊಗರು ರೈಲು ನಿಲ್ದಾಣಗಳಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ. ಮಂಗಳೂರು- ಬೆಂಗಳೂರು ರೈಲು ಮಾರ್ಗವನ್ನು ಮೀಟರ್ ಗೇಜ್‌ನಿಂದ ಬ್ರಾಡ್ ಗೇಜ್‌ಗೆ ಹಳಿ ಪರಿವರ್ತನೆ ಮಾಡಿದ ಬಳಿಕ ಈ ರೈಲು ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ರೈಲು ಹಳಿಗೆ ಸಮಾನಾಂತರವಾಗಿತ್ತು. ಇದರಿಂದ ರೈಲ್ವೆ ಪ್ರಯಾಣಿಕರಿಗೆ ರೈಲು ಹತ್ತಲು, ಇಳಿಯಲು ಸಮಸ್ಯೆಯಾಗಿತ್ತು. ಇಲ್ಲಿನ ರೈಲು ನಿಲ್ದಾಣಗಳ ಪ್ಲಾಟ್‌ಫಾರ್ಮ್ ಎತ್ತರಿಸಬೇಕು, ಮೂಲಸೌಕರ್ಯ ಅಭಿವೃದ್ಧಿಪಡಿಸಬೇಕು ಎಂದು ರೈಲ್ವೆ ಪ್ರಯಾಣಿಕರು, ಸ್ಥಳೀಯರು ಹಲವಾರು ವರ್ಷಗಳಿಂದ ಒತ್ತಾಯಿಸುತ್ತಿದ್ದರು. ಅದರಂತೆ ಮೂಲಸೌಕರ್ಯ ಅಭಿವೃದ್ಧಿಗೆ ಇಲಾಖೆಯಿಂದ 4.50 ಕೋಟಿ ರೂ. ಅನುದಾನ ಮಂಜೂರುಗೊಂಡಿತ್ತು.

ಗ್ರಾಮೀಣ ಭಾಗದ ಬಜಕೆರೆ, ಕೋಡಿಂಬಾಳ, ಎಡಮಂಗಲ, ಕಾಣಿಯೂರು, ನರಿಮೊಗರು ರೈಲು ನಿಲ್ದಾಣಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ನಿರಂತರವಾಗಿ ಮನವಿ ಸಲ್ಲಿಸುತ್ತಾ ಬರಲಾಗಿತ್ತು. ಇದೀಗ ಬೇಡಿಕೆ ಈಡೇರಿಕೆಯಾಗಿದೆ. ಪ್ಲಾಟ್‌ಫಾರ್ಮ್ ಎತ್ತರಿಸಿದ ಕಾರಣ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಿದೆ. ಸುಬ್ರಹ್ಮಣ್ಯ ರೋಡ್- ಮಂಗಳೂರು ನಡುವೆ ಪ್ಯಾಸೆಂಜರ್ ರೈಲು ಓಡಾಟ ಇದೀಗ ಆರಂಭವಾದ ಕಾರಣ ಈ ರೈಲು ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಪ್ರಸಾದ್ ನೆಟ್ಟಣ, ನೆಟ್ಟಣ, ಪುತ್ತೂರು ಬಳಕೆದಾರರ ವೇದಿಕೆ https://www.vijayavani.net/bhagavata-saptah-inaugurated-at-kavoor-sri-guru-raghavendra-math https://www.vijayavani.net/3-additional-underpasses-in-nelyadi-town

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net