

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಗ್ರಾಮದಲ್ಲಿ ಸಿಸಿ ರಸ್ತೆ, ಚರಂಡಿ, ನಲಿಕಲಿ ಶಾಲಾ ಕೊಠಡಿ ಸೇರಿ ಎರಡು ಕೊಠಡಿಗಳ ನಿರ್ಮಾಣಕ್ಕೆ 1.5 ಕೋಟಿ ರೂ.ಗಳ ಅನುದಾನವನ್ನು ಇಸ್ರೋ ಕಂಪನಿಯಿಂದ ಪಡೆದುಕೊಳ್ಳಲಾಗಿದ್ದು, ಪೂಜೇನ ಅಗ್ರಹಾರ ಅಭಿವೃದ್ಧಿ ಕಾಣಲಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ದೊಡ್ಡಗಟ್ಟಿಗನಬ್ಬೆ ಗ್ರಾಪಂ ವ್ಯಾಪ್ತಿಯ ಪೂಜೇನ ಅಗ್ರಹಾರದಲ್ಲಿ 1.5 ಕೋಟಿ ರೂ.ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಸುಸಜ್ಜಿತ ರಸ್ತೆಗಳು, ನೀರು ಹರಿಯಲು ಸುಸಜ್ಜಿತವಾದ ಚರಂಡಿ, ಸೇರಿ ಶಾಲಾ ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದ ನೂತನ ಶಾಲಾ ಕೊಠಡಿಗಳು ನಿರ್ಮಾಣ ಮಾಡುವ ಯೋಜನೆ ಇದಾಗಿದ್ದು, ಗುಣಮಟ್ಟದ ಕಾಮಗಾರಿಗೆ ಗುತ್ತಿಗೆದಾರರು ಆದ್ಯತೆ ನೀಡಬೇಕು ಎಂದರು. ಖಾಸಗಿ ಕಂಪನಿಗಳಿಂದ ಅನುದಾನ ತರುವುದು ಅಷ್ಟು ಸುಲಭವಲ್ಲ. ಇದರ ನಡುವೆ ಶಾಸಕರಾಗಿ ನಾನು ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪೂಜೇನ ಅಗ್ರಹಾರ ಕಷ್ಣಮೂರ್ತಿ ಅವರು ಇಸ್ರೋ ಕಂಪನಿ ಬಳಿ ಚರ್ಚೆ ಮಾಡಿ 1.5 ಕೋಟಿ ರೂ. ಅನುದಾನವನ್ನು ತಂದಿದ್ದೇವೆ ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪೂಜೇನ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ, ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಸ್ಮಶಾನಕ್ಕೆ ಜಾಗ ಇಲ್ಲದ ಪರಿಣಾಮವಾಗಿ ಕೋಟ್ಯಂತರ ರೂ.ವೆಚ್ಚದ ಭೂಮಿಯನ್ನು ವೈಯಕ್ತಿಕ ಹಣದಲ್ಲಿ ಖರೀದಿ ಮಾಡುವುದರ ಮೂಲಕ ರುದ್ರಭೂಮಿಗೆ ನೀಡಲಾಗಿದೆ ಎಂದರು.
ಹೊಸಕೋಟೆ ಯೋಜನಾ ಪ್ರಾಧಿಕಾರದ ಸದಸ್ಯ ಕೊರಳೂರು ಸುರೇಶ್, ದೊಡ್ಡಗಟ್ಟಿಗಬ್ಬೆ ಗ್ರಾಪಂ ಸದಸ್ಯ ರಮೇಶ್, ಗಗನಾ ಚಂದ್ರೇಗೌಡ, ಪಿಡಿಒ ಸುಬ್ರಮಣಿ, ಮುಖಂಡರಾದ ಭಗವಂತಪ್ಪ, ಬಚ್ಚಣ್ಣ, ವಾಸುದೇವ, ಎ.ನಾರಾಯಣ ಸ್ವಾಮಿ ಇದ್ದರು.
ಗ್ರಾರಂಟಿ ಯೋಜನೆ ನಿಲ್ಲಿಸಲ್ಲ: ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ 5 ಗ್ಯಾರಂಟಿಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ. ಈ ಹಿಂದೆ ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಅವರ ಆರ್ಥಿಕ ಶಿಸ್ತಿನ ಪರಿಣಾಮವಾಗಿ ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಹೊಂದಾಣಿಕೆ ಕಷ್ಟಕರವಾಗಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ರೀತಿಯಲ್ಲಿ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಲಿದ್ದಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.