

ಅರಸೀಕೆರೆ ಗ್ರಾಮಾಂತರ: ಸರ್ಕಾರದಿಂದ ದೊರೆಯುವ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಜನರ ಸೇವೆಗೆ ಒದಗಿಸಿ ಕೊಟ್ಟಾಗ ಮಾತ್ರ ಅಭಿವೃದ್ಧಿಗೆ ಸಹಕಾರಿ ಆಗಲಿದೆ ಎಂದು ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ನಗರದ ಹೊರ ವಲಯದ ವಾಲ್ಮೀಕಿ ಸಮುದಾಯ ಭವನದ ಆವರಣದಲ್ಲಿ ಗುರುವಾರ ಗಣಪತಿ ದೇವಾಲಯದ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಸರ್ಕಾರದಿಂದ ದೊರೆತ ಅನುದಾನವನ್ನು ಬಳಸಿಕೊಂಡು ಸುಸಜ್ಜಿತವಾಗಿ ವಾಲ್ಮೀಕಿ ಸಮುದಾಯ ಭವವನ್ನು ನಿರ್ಮಿಸಿ ಇತರರಿಗೆ ಮಾದರಿಯಾಗಿರುವ ವಾಲ್ಮೀಕಿ ಸಂಘದ ಪದಾಧಿಕಾರಿಗಳ ಕಾರ್ಯವೈಖರಿ ಮೆಚ್ಚುವಂತಹದ್ದು ಎಂದರು.
ವಾಲ್ಮೀಕಿ ಸಮಾಜದಂತೆ ಇತರೆ ಸಮಾಜದವರಿಗೂ ನಗರ ವ್ಯಾಪ್ತಿಯಲ್ಲಿ ಸಮುದಾಯ ಭವನವನ್ನು ನಿರ್ಮಿಸಿಕೊಳ್ಳಲು ಸರ್ಕಾರದ ಸವಲತ್ತಿನ ಜತೆಗೆ ವೈಯಕ್ತಿಕವಾಗಿಯೂ ನೆರುವ ಒದಗಿಸಿದ್ದರೂ ಕೆಲವು ಸಮಾಜದ ಸಮುದಾಯ ಭವನಗಳ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ ಎಂದು ವಿಷಾದಿಸಿದರು.
ನಗರಸಭೆ ಅಧ್ಯಕ್ಷ ಎಂ. ಸಮಿವುಲ್ಲಾ ಮಾತನಾಡಿ, ಪ್ರತಿಯೊಂದು ಸಣ್ಣ ಪುಟ್ಟ ಸಮಾಜಗಳನ್ನ ಗುರುತಿಸಿ ಆ ಸಮಾಜಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಸಕ ಶಿವಲಿಂಗೇಗೌಡ ಅವರ ಕಾರ್ಯವೈಖರಿ ಸಹಜವಾಗಿಯೇ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೆ ಯುವ ರಾಜಕಾರಣಿಗಳಿಗೆ ಆದರ್ಶಪ್ರಾಯವಾಗಿ ಎಂದರು.
ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಗೊಲ್ಲರಹಳ್ಳಿ ಹನುಮಪ್ಪ ಮಾತನಾಡಿ, ನಮ್ಮ ಸಮಾಜವನ್ನು ಗುರುತಿಸಿ ಸಮಾಜದ ಮುಖಂಡರನ್ನು ರಾಜಕೀಯವಾಗಿ ಬೆಳೆಸುವ ಜತೆಗೆ ಸಮಾಜದ ನೋವು, ನಲಿವಿಗೆ ಸ್ಪಂದಿಸುತ್ತಿರುವ ಶಾಸಕ ಶಿವಲಿಂಗೇಗೌಡ ಅವರು ರಾಜಕೀಯವಾಗಿ ಇನ್ನೂ ಉನ್ನತ ಸ್ಥಾನಮಾನಕ್ಕೆ ಏರಲಿ ಎಂದು ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಮುಖಂಡರಾದ ಜಯಣ್ಣ, ಕೆಲ್ಲಂಗೆರೆ ಕುಮಾರ್, ರಂಗಸ್ವಾಮಿ, ಬಾಯ್ಲರ್ ಕುಮಾರ್, ರಾಜಣ್ಣ ಇತರರು ಇದ್ದರು.