ತಡೆಹಿಡಿದ ಕಾಮಗಾರಿ ಮಂಜೂರು ಮಾಡಿಸಿ

web 2
Published on

ಎನ್.ಆರ್.ಪುರ: ತಡೆಹಿಡಿದಿರುವ ಕಾಮಗಾರಿಗಳನ್ನು ಮಂಜೂರು ಮಾಡಿಕೊಡುವಂತೆ ಸರ್ಕಾರವನ್ನು ಒತ್ತಾಯಿಸಿ ಅ.9ರಂದು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಅಳಲಗೆರೆಯಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಗಾಲು ಹಾಕಲಾಗುತ್ತಿದೆ. ಇಂತಹ ಕೆಟ್ಟ ಕೆಲಸ ಮಾಜಿ ಜನಪ್ರತಿನಿಧಿಯೋರ್ವರು ಆರಂಭಿಸಿದ್ದಾರೆ ಎಂದು ಆರೋಪಿಸಿದರು.

ನಾನು ಶಾಸಕನಾದ ಕೂಡಲೇ 5 ಬಾರಿ ರೆಸಾರ್ಟ್ ರಾಜಕಾರಣದಲ್ಲಿ ಅನಿವಾರ್ಯ ಕಾರಣಗಳಿಂದ ಪಾಲ್ಗೊಳ್ಳಬೇಕಾಯಿತು. ನಂತರ ಮೂರು ಬಾರಿ ಕ್ಷೇತ್ರದಲ್ಲಿ ಪ್ರವಾಹ ಎದುರಿಸಬೇಕಾಯಿತು. ಎಂಎಡಿಬಿ ಅಧ್ಯಕ್ಷನಾದ ನಂತರ ಅನುದಾನ ಮಂಜೂರು ಮಾಡಿಸಿದ್ದೆ. ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರರ ಪ್ರಭಾವದಿಂದ ಜಿಲ್ಲೆಯ ಆಗಿನ ಡಿಸಿಯೋರ್ವರು ಏಕಾಏಕಿ ಅನುದಾನವನ್ನು ಶಿಕಾರಿಪುರಕ್ಕೆ ವರ್ಗಾಯಿಸಿದರು. ಅಧ್ಯಕ್ಷರ ವಿವೇಚನಾ ನಿಧಿಗೆ 15 ಕೋಟಿ ಮಂಜೂರಾಗಿ, ಕಾಮಗಾರಿಯೂ ಮಂಜೂರಾಗಿತ್ತು. ಮಂಜೂರಾದ ಕಾಮಗಾರಿಗಳನ್ನೇ ತಡೆಹಿಡಿಯಲಾಯಿತು. ಲೋಕೋಪಯೋಗಿ ಇಲಾಖೆಯ 36 ಕೋಟಿ ರೂ. ತಡೆಹಿಡಿಯಲಾಗಿದೆ. ಇದರಿಂದ ಅಭಿವೃದ್ಧಿ ಕುಂಠಿತವಾಯಿತು ಎಂದು ಆರೋಪಿಸಿದರು.

ಸೌತಿಕೆರೆ ದ್ವಾರಮಕ್ಕಿ ರಸ್ತೆಯಿಂದ ಅಳಲಗೆರೆ ರಸ್ತೆ ಅಭಿವೃದಿ, ಶಿವಮೊಗ್ಗ , ಎನ್.ಆರ್.ಪುರ ಮುಖ್ಯ ರಸ್ತೆಯಲ್ಲಿ ಮೆಣಸೂರಿನಿಂದ ಧರೆಹಡ್ಲು ಮಾರ್ಗವಾಗಿ ಸೌತಿಕೆರೆ, ದ್ವಾರಮಕ್ಕಿ ರಸ್ತೆ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ 40 ಲಕ್ಷ ರೂ. ಮಂಜೂರಾಗಿದೆ. ಶೀಘ್ರವೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net