ಇಲಾಖೆಗಳ ಅಸಹಕಾರದಿಂದ ಅಭಿವೃದ್ಧಿ ಕ್ಷೀಣ

23blrp1
ಶ್ರೀಚನ್ನಕೇಶವಸ್ವಾಮಿ ದೇಗುಲ ಆವರಣದಲ್ಲಿ ವಿವಿಧ ಇಲಾಖೆಗಳಿಂದ ಆಯೋಜಿಸಿದ್ದ ಸ್ವಚ್ಛ ಭಾರತ ಕಾರ್ಯಕ್ರಮಕ್ಕೆ ಶಾಸಕ ಎಚ್.ಕೆ.ಸುರೇಶ್ ಚಾಲನೆ ನೀಡಿದರು.
Published on

ಬೇಲೂರು: ಪುರಾತತ್ವ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಬೇಲೂರು-ಹಳೇಬೀಡು ಜಗತ್ಪ್ರಸಿದ್ಧವಾಗಿದ್ದರೂ ಅಭಿವೃದ್ಧಿಯಲ್ಲಿ ಹಿಂದುಳಿಯಲು ಕಾರಣವಾಗಿವೆ ಎಂದು ಶಾಸಕ ಎಚ್.ಕೆ.ಸುರೇಶ್ ಬೇಸರ ವ್ಯಕ್ತಪಡಿಸಿದರು.


ಶ್ರೀ ಚನ್ನಕೇಶವಸ್ವಾಮಿ ದೇಗುಲ ಆವರಣದಲ್ಲಿ ಕೇಂದ್ರ ಪುರಾತತ್ವ ಹಾಗೂ ಪ್ರವಾಸೋದ್ಯಮ ಇಲಾಖೆ, ಜಿಲ್ಲಾ ಪಂಚಾಯಿತಿ, ಪುರಸಭೆ, ದೇವಸ್ಥಾನ ಆಡಳಿತ ಮಂಡಳಿಯಿಂದ ಸೋಮವಾರ ಆಯೋಜಿಸಿದ್ದ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಬೇಲೂರು ಪ್ರವಾಸಿ ತಾಣ. ಇಲ್ಲಿಗೆ ದೇಶ-ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಆದ್ದರಿಂದ ಪ್ರತಿನಿತ್ಯ ದೇಗುಲ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಬೇಕು. ಬೇಲೂರು-ಹಳೇಬೀಡು ದೇಗುಲ ಸಮೀಪ ಪ್ರವಾಸಿಗರಿಗೆ ಮೂಲ ಸೌಕರ್ಯ ಒದಗಿಸುವುದಕ್ಕಾಗಿ ಸುತ್ತಮುತ್ತ ಅಭಿವೃದ್ಧಿ ಕಾರ್ಯಕ್ಕೆ ಮುಂದಾದರೆ ಕೇಂದ್ರ ಪುರಾತತ್ವ ಇಲಾಖೆಯವರು ಇಲ್ಲ ಸಲ್ಲದ ಕಾರಣ ನೀಡಿ ಕಾಮಗಾರಿ ಸ್ಥಗಿತಗೊಳಿಸುತ್ತಾರೆ. ಧಾರ್ಮಿಕ ದತ್ತಿ ಇಲಾಖೆಯಿಂದ ಭಕ್ತರಿಗೆ ಸೌಕರ್ಯ ಕಲ್ಪಿಸಲು ಮುಂದಾದರೆ ಪ್ರವಾಸೋದ್ಯಮ ಇಲಾಖೆಯವರು ಅಡ್ಡಗಾಲು ಹಾಕುತ್ತಾರೆ. ದೇಗುಲದ ಹಿಂಭಾಗದಲ್ಲಿರುವ ಹೈಟೆಕ್ ಶೌಚಗೃಹ, ವಸತಿ ಗೃಹ ನಿರ್ಮಿಸಲು ಪ್ರವಾಸೋದ್ಯಮದವರು ಮುಂದಾದರೆ ಧಾರ್ಮಿಕ ದತ್ತಿ ಇಲಾಖೆಯವರು ಅಡ್ಡಿ ಪಡಿಸುತ್ತಿದ್ದಾರೆ. ಈ ಮೂರು ಇಲಾಖೆಗಳ ಸಮನ್ವಯದ ಕೊರತೆಯಿಂದ ಪ್ರವಾಸಿ ಕೇಂದ್ರ ಬೇಲೂರು ಅಭಿವೃದ್ಧಿಯಿಂದ ಕುಂಠಿತವಾಗಿದೆ. ಪ್ರವಾಸಿಗರು ಹಾಗೂ ಭಕ್ತರು ಶಾಪ ಹಾಕುತ್ತಿದ್ದಾರೆ. ಈ ಎಲ್ಲ ಇಲಾಖೆಗಳು ಒಂದೇ ಇಲಾಖೆಯಡಿ ತರಬೇಕೆಂದು ಅಧಿವೇಶನ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರ ಗಮನಕ್ಕೆ ತಂದಿದ್ದೇನೆ ಎಂದರು.


ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಮಾತನಾಡಿ, ಸ್ವಚ್ಛ ಭಾರತದಡಿ ಮೂರು ಇಲಾಖೆಗಳು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪ್ರವಾಸಿ ಕೇಂದ್ರವನ್ನು ಅಭಿವೃದ್ಧಿ ಪಡಿಸುವಲ್ಲಿ ಶಾಸಕರು ಮುಂದಾಗುತ್ತಿಲ್ಲ. ಕೇವಲ ನೆಪ ಮಾತ್ರಕ್ಕೆ ಮಾತನಾಡುತ್ತಾರೆ. ಆದರೆ ಎಲ್ಲರೂ ಒಂದು ದಿನ ಮಾತ್ರ ಸ್ವಚ್ಛತೆಗೆ ಮುಂದಾದರೆ ಸಾಲದು. ಪುರಸಭೆಯಿಂದ ನಿತ್ಯ ಸ್ವಚ್ಛತೆ ಮಾಡುತ್ತೇವೆ. ಬೇಲೂರಿಗೆ ಆಗಮಿಸುವ ಪ್ರವಾಸಿಗರಿಗೆ ಅಗತ್ಯ ಶೌಚಗೃಹ, ಕುಡಿಯುವ ನೀರಿಗೂ ಪರದಾಡುತ್ತಿದ್ದಾರೆ. ಜತೆಗೆ ನವರಂಗ ಮಂಟಪ ಶಿಥಿಲಾವಸ್ಥೆ ತಲುಪಿದ್ದು, ಅವಘಡ ಸಂಭವಿಸಿದರೆ ಯಾರು ಹೊಣೆ ಎಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ ಗೌತಮ್, ರಾಜ್ಯ ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ, ಪೊಲೀಸ್ ಇನ್‌ಸ್ಪೆಕ್ಟರ್ ಜಯಪ್ರಕಾಶ್, ಮಾರ್ಗದರ್ಶಿ ಸಂಘದ ಅಧ್ಯಕ್ಷ ರಾಮಚಂದ್ರ, ಪುರಸಭೆ ಮುಖ್ಯಾಧಿಕಾರಿ ಸುಜಯ್, ದೇವಸ್ಥಾನ ಇಒ ಯೋಗೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net