ಪಿಕಪ್ ನಾಲೆಗಳ ಅಭಿವೃದ್ಧಿಗೆ ಕ್ರಮ: ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಭರವಸೆ

mandya
Published on

ಮದ್ದೂರು: ತಾಲೂಕು ವ್ಯಾಪ್ತಿಯಲ್ಲಿ ಬರುವ ಪಿಕಪ್ ನಾಲೆಗಳನ್ನು ಆಧುನಿಕವಾಗಿ ಅಭಿವೃದ್ಧಿಗೊಳಿಸಲು ಕ್ರಮ ವಹಿಸಲಾಗಿದೆ ಎಂದು ಶಾಸಕ ಡಿ.ಸಿ.ತಮ್ಮಣ್ಣ ತಿಳಿಸಿದರು.

ತಾಲೂಕಿನ ಮಲ್ಲಯ್ಯ ನಗರದ ಬಳಿಯಲ್ಲಿ ಕುದರಗುಂಡಿ ಪಿಕಪ್ ನಾಲೆಯನ್ನು 80 ಲಕ್ಷ ರೂ. ವೆಚ್ಚದಲ್ಲಿ ಬಾಕ್ಸ್ ಡ್ರೈನ್ ನಿರ್ಮಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ರೈತರ ಜೀವನಾಡಿಯಾಗಿರುವ ನಾಲೆಗಳ ಅಭಿವೃದ್ಧಿಗೆ ಅಧಿಕಾರಾವಧಿಯಲ್ಲಿ ಹೆಚ್ಚು ಒತ್ತು ನೀಡಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಭಾಗದ ರೈತರಿಗೆ ಕೆ.ಆರ್.ಎಸ್. ಅಣೆಕಟ್ಟೆಯಿಂದ ಬರುವ ನೀರು ವಿಶ್ವೇಶ್ವರಯ್ಯ ನಾಲೆ ಹಾಗೂ ಪಿಕಪ್ ನಾಲೆ ಮೂಲಕ ರೈತರ ಜಮೀನು ತಲುಪುತ್ತದೆ. ಈ ನೀರನ್ನು ನಂಬಿ ರೈತರು ವ್ಯವಸಾಯ ಮಾಡುತ್ತಿದ್ದು ಬರುವ ನೀರು ಸರಾಗವಾಗಿ ರೈತರ ಭೂಮಿಗೆ ಸಾಗುವಂತೆ ಮಾಡಲು ನಾಲೆಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಈ ನಿಟ್ಟಿನಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಕಾಮಗಾರಿ ಜತೆಗೆ ಸಿ.ಎ.ಕೆರೆ ಏತನೀರಾವರಿ ಯೋಜನೆ ಮೂಲಕ ಈ ಭಾಗದ ರೈತರಿಗೆ ವ್ಯವಸಾಯಕ್ಕೆ ನೀರು ದೊರೆಯುತ್ತದೆ. ಇದರಿಂದ ಈ ಭಾಗದ ರೈತರಿಗೂ ಕೃಷಿ ಚಟುವಟಿಕೆಗೆ ಅನುಕೂಲವಾಗಲಿದೆ. ಏತನೀರಾವರಿ ಕಾಮಗಾರಿ ಪೂರ್ಣಗೊಂಡ ನಂತರ ಹೆಬ್ಬಾಳದ ನೀರು ಕೂಡ ಬಳಕೆಗೆ ಲಭ್ಯವಾಗಲಿದೆ. ವಿಶ್ವೇಶ್ವರಯ್ಯ ನಾಲೆಯ ನೀರಿನ ಜತೆಗೆ ಹೆಬ್ಬಾಳದ ನೀರನ್ನು ಈ ಭಾಗದ ರೈತರು ಬಳಕೆ ಮಾಡಬಹುದಾಗಿದೆ ಎಂದು ತಿಳಿಸಿದರು.

ಮುಖಂಡರಾದ ಶಿವಲಿಂಗು, ಬಸವರಾಜು, ಚನ್ನಪ್ಪ, ಶಿವರಾಮು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net