

ವಿಜಯಪುರ: ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ವಿಜಯಪುರ ನಗರ ಬಡ್ತಿ ಹೊಂದಿದ್ದರೂ ಇಲ್ಲಿನ ಕೆಲ ವಾರ್ಡ್ಗಳಲ್ಲಿ ಅಭಿವೃದ್ಧಿ ಎನ್ನುವುದು ಗಗನ ಕುಸುಮವಾಗಿದೆ. ಸದ್ಯ ಅದಕ್ಕೆ ನಿದರ್ಶನ ಎಂಬಂತೆ ವಾರ್ಡ್ ನಂ. 20 ರ ವ್ಯಾಪ್ತಿಯ ಮುಬಾರಕ ಕಾಲನಿ, ಟಿಪ್ಪು ಸುಲ್ತಾನ ಮ್ಯಾರೇಜ್ ಹಾಲ್ ಬಳಿಯ ರಸ್ತೆ ಮತ್ತು ಜೆಎಂ ರೋಡ್ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿವೆ.
ಇನ್ನು ಮಳೆ ಬಂದರೆ ಇಲ್ಲಿನ ತಗ್ಗು ದಿಣ್ಣೆಗಳಿಂದ ಕೂಡಿದ ರಸ್ತೆಗಳಲ್ಲಿ ನೀರು ನಿಂತು ರಸ್ತೆ ಪೂರ್ತಿ ರಾಡಿ ನೀರು ತುಂಬಿಕೊಂಡು ನಡೆದು ಹೋಗಲು ಆಗದೇ ಇರುವ ಪರಿಸ್ಥಿತಿ ನಿರ್ಮಾಣವಾಗುತ್ತೆ.
ಈ ರಸ್ತೆಯ ಮೂಲಕ ಹಲವು ವಿದ್ಯಾರ್ಥಿಗಳು ಶಾಲೆ& ಕಾಲೇಜುಗಳಿಗೆ ತೆರಳಲು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ. ಚಿಕ್ಕ ಮಕ್ಕಳು ಕೆಸರಿನ ಗುಂಡಿಗಳಿಗೆ ಬಿದ್ದಿರುವ ಹಲವು ಟನೆಗಳು ನಡೆದಿವೆ.
ರಸ್ತೆ ತುಂಬಾ ಗಲೀಜು ನೀರು ಸಾಂಕ್ರಾಮಿಕ ರೋಗಗಳಿಗೂ ಆಹ್ವಾನ ನೀಡುವಂತಾಗಿವೆ.
ಇಲ್ಲಿನ ಬಡಾವಣೆಗಳಲ್ಲಿ ರಸ್ತೆ ಅಷ್ಟೇ ಅಲ್ಲದೆ, ಮೂಲ ಸೌಕರ್ಯಗಳಿಗೂ ಕೊರತೆ ಎದ್ದು ಕಾಣುತ್ತಿದೆ. ಸರಿಯಾದ ಬೀದಿ ದೀಪಗಳ ನಿರ್ವಹಣೆ, ಡೆನೇಜ್ ಸೇರಿ ಮತ್ತಿತರರ ಸಮಸ್ಯೆಗಳು ಜನರನ್ನು ಕಾಡತೊಡಗಿವೆ. ವಾರ್ಡ್ ಸಮಸ್ಯೆಗಳಿಗೆ ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ತ್ವರಿತವಾಗಿ ಸಮಸ್ಯೆ ನಿವಾರಿಸಲು ಕ್ರಮಕೈಗೊಳ್ಳಬೇಕೆಂದು ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ಕಾರ್ಯದರ್ಶಿ ನಿಜಾಮುದ್ದೀನ ಹಿರಿಯಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.