

ಶಿರಸಿ: ಜನಾಂಗೀಯ ಅಧ್ಯಯನದ ಕೊರತೆ ಹಾಗೂ ಅಗತ್ಯ ಪುರಾವೆ ಒದಗಿಸಲು ಸಾಧ್ಯವಾಗದ ಜಿಲ್ಲೆಯ ಹಲವಾರು ಸಮುದಾಯಗಳು ಈವರೆಗೂ ಬುಡಕಟ್ಟು ವರ್ಗಕ್ಕೆ ಸೇರಲು ಸಾಧ್ಯವಾಗಿಲ್ಲ ಎಂದು ಶಾಸಕ ಭೀಮಣ್ಣ ನಾಯ್ಕ ವಿಷಾದ ವ್ಯಕ್ತಪಡಿಸಿದರು.
ನಗರದಲ್ಲಿ ಸ್ಕೊಡ್‌ವೆಸ್ ಸಂಸ್ಥೆ ಆಯೋಜಿಸಿದ್ದ 2022-23ನೇ ಸಾಲಿನ ಸರ್ವ ಸಾಧಾರಣ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ವಿಶ್ವವಿದ್ಯಾಲಯಗಳು ಸಮುದಾಯ ಆಧಾರಿತ ಅಧ್ಯಯನಗಳ ಫಲಿತಾಂಶಗಳನ್ನು ಆಯಾ ಸಮುದಾಯಗಳಿಗೆ ಹಾಗೂ ಸರ್ಕಾರಕ್ಕೆ ಸಲ್ಲಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು.
ಸ್ಕೊಡ್‌ವೆಸ್ ಸಂಸ್ಥೆಯ ಸಾಧನೆಗಳನ್ನು ಪ್ರಶಂಶಿಸಿದ ಶಾಸಕರು, ಬುಡಕಟ್ಟು ಸಮುದಾಯಗಳ ಏಳಿಗೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಂಸ್ಥೆಯ ಮುಖ್ಯಸ್ಥರನ್ನು ಕೋರಿದರು.
ಶಾಸಕ ಭೀಮಣ್ಣ ಅವರನ್ನು ಸನ್ಮಾನಿಸಿ ಮಾತನಾಡಿದ ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ಸ್ಕೊಡ್‌ವೆಸ್ ಸಂಸ್ಥೆಯ ನೂತನ ಅಧ್ಯಕ್ಷರೂ ಆದ ಡಾ. ಹಿ.ಚಿ. ಬೋರಲಿಂಗಯ್ಯ, ಉತ್ತರ ಕನ್ನಡ ಜಿಲ್ಲೆ ಎದುರಿಸುತ್ತಿರುವ ಸಾಂಸ್ಕೃತಿಕ, ಪಾರಂಪರಿಕ, ಪ್ರಾಕೃತಿಕ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ವಿಶ್ಲೇಷಿಸಿ ಕ್ಷೇತ್ರದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಶಾಸಕರಲ್ಲಿ ಕೋರಿದರು.
ಅಧ್ಯಕ್ಷತೆ ವಹಿಸಿದ್ದ ಸ್ಕೊಡ್‌ವೆಸ್‌ನ ಉಪಾಧ್ಯಕ್ಷ ಕೆ.ವಿ. ಕೂರ್ಸೆ, ಹಂಪಿ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಎ.ಎಸ್. ಪ್ರಭಾಕರ, ಅರಣ್ಯ ಕಾಲೇಜಿನ ಡೀನ್ ಡಾ. ಆರ್. ವಾಸುದೇವ, ಸಂಸ್ಥೆಯ ಕಾರ್ಯದರ್ಶಿ ಸರಸ್ವತಿ ಎನ್. ರವಿ, ನಿರ್ದೇಶಕರಾದ ವಸಂತ ಹಾದಿಮನೆ, ಪ್ರೊ. ಎ.ಎನ್. ಹೊಸಮನಿ, ದಯಾನಂದ ಅಗಾಸೆ ಮಾತನಾಡಿದರು.
ನಿರ್ದೇಶಕ ಶ್ರೀನಿವಾಸ ಮೂರ್ತಿ, ಎಚ್.ಜಿ. ಲತಾ, ಲಲಿತಾ ಹೆಗಡೆ, ಜ್ಯೂಲಿಯಾನಾ ಫನಾರ್ಂಡೀಸ್, ಪ್ರತಿಭಾ ಭಟ್ ಹಾಗೂ ಸಂಸ್ಥೆಯ ಪ್ರಮುಖ ಸಿಬ್ಬಂದಿ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಹಾಗೂ ಪ್ರೊ. ಕೆ.ಎನ್. ಹೊಸಮನಿ ಕಾರ್ಯಕ್ರಮ ನಿರ್ವಹಿಸಿದರು.