

ಗೋಕರ್ಣ: ಯಾವ ಜಿಲ್ಲೆ ಹೆಚ್ಚು ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುತ್ತದೆಯೋ ಆ ಜಿಲ್ಲೆ ರಾಜ್ಯದಲ್ಲಿಯೇ ಅಭಿವೃದ್ಧಿಯಲ್ಲಿ ಮುಂದಿರುತ್ತದೆ. ಸೈಬರ್ ಅಪರಾಧಗಳು, ಜೂಜು, ಮಟ್ಕಾ, ಮಾದಕ ದಂಧೆಯಂತಹ ಅವ್ಯವಹಾರಗಳು ಜಿಲ್ಲೆಯ ಔನ್ನತ್ಯಕ್ಕೆ ಹಾನಿಯುಂಟು ಮಾಡುತ್ತವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಎಂ. ನಾರಾಯಣ ಹೇಳಿದರು.
ಹತ್ತಿರದ ತೊರ್ಕೆಯಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ನಾಡವರ ಸಂಘದ ಸಹಯೋಗದಲ್ಲಿ ಶ್ರೀರಾಮಕೃಷ್ಣ ಮಂದಿರ ಸಭಾಭವನದಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಗೋಕರ್ಣ ಸೇರಿದಂತೆ ಸಮಗ್ರ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದೆ. ಶಾಂತಿ, ಸುರಕ್ಷತೆ ಮತ್ತು ಅಕ್ರಮ ದಂಧೆಯಿಂದ ದೂರವಿರುವ ಮೂಲಕ ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಶಾಂತತೆ ಮತ್ತು ಕಾನೂನು ಭಂಗಕ್ಕೆ ಕಾರಣರಾಗುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯವಾದ ಕ್ರಮ ನಿಶ್ಚಿತ.
ಗೋಕರ್ಣ ಮತ್ತು ಸುತ್ತಲಿನ ಭಾಗಗಳಲ್ಲಿ ಪ್ರವಾಸೋದ್ಯಮ ವ್ಯವಹಾರ ಕೈಗೊಳ್ಳುವವರು ಎಲ್ಲ ಬಗೆಯ ಅಕ್ರಮಗಳ ವಿರುದ್ಧ ಹೋರಾಡಲು ಪೊಲೀಸರೊಂದಿಗೆ ಸಹಕರಿಸುವಂತಾಗಬೇಕು ಎಂದರು.
ಸಾರ್ವಜನಿಕರ ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಅಹವಾಲು ಸ್ವೀಕರಿಸಲು ಪ್ರತ್ಯೇಕ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದರು.
ತೊರ್ಕೆ ನಾಡವರ ಸಂಘದ ನೇತೃತ್ವದಲ್ಲಿ ಈ ಭಾಗದ ವಿವಿಧ ಸಂಘ ಸಂಸ್ಥೆಗಳಿಂದ ಎಸ್ಪಿ ಅವರನ್ನು ಸನ್ಮಾನಿಸಲಾಯಿತು.
ಜಿಪಂ ಮಾಜಿ ಸದಸ್ಯ ಪ್ರದೀಪ ನಾಯಕ ಮಾತನಾಡಿ, ಜಿಲ್ಲಾ ವರಿಷ್ಠರಾಗಿ ಅಧಿಕಾರ ಸ್ವೀಕರಿಸಿದ ತರುವಾಯ ಜಿಲ್ಲೆಯಲ್ಲಿ ಕಾನೂನು ಮತ್ತು ಶಾಂತಿ ಸುರಕ್ಷೆಗಾಗಿ ತೆಗೆದುಕೊಂಡ ಕ್ರಮಗಳನ್ನು ಶ್ಲಾಘಿಸಿದರು.
ನಿವೃತ್ತ ಎಸ್‌ಪಿ ಎನ್.ಟಿ. ಪ್ರಮೋದ ರಾವ್, ಆನುವಂಶೀಯ ಉಪಾಧಿವಂತ ಮಂಡಳದ ಅಧ್ಯಕ್ಷ ವೇ.ರಾಜಗೋಪಾಲ ಅಡಿ ಗುರೂಜಿ, ಗೋಪಾಲಕೃಷ್ಣ ನಾಯಕ ಅಡ್ಲೂರು, ಸ್ಥಳೀಯ ಪೊಲೀಸ್ ಇನಸ್ಪೆಕ್ಟರ್ ಶ್ರೀಧರ ಮಾತನಾಡಿದರು.
ತೊರ್ಕೆ ಗ್ರಾಪಂ ಅಧ್ಯಕ್ಷ ಆನಂದು ಕವರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀಮಹಾಬಲೇಶ್ವರ ಸಹಕಾರ ಬ್ಯಾಂಕ್ ಅಧ್ಯಕ್ಷ ಮೋಹನ ನಾಯಕ, ನಿವೃತ್ತ ಡಿಎಸ್‌ಪಿ ಮಂಜುನಾಥ ಕವರಿ, ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಗೋವಿಂದ ಗೌಡ, ಗುತ್ತಿಗೆದಾರ ಗಣಪತಿ ಪಟಗಾರ, ರೈಲ್ವೆ ಅಭಿವೃದ್ಧಿ ಸಮಿತಿಯ ರಾಜೀವ ಗಾಂವಕರ, ಬೆಟ್ಕುಳಿ ನಾಮಧಾರಿ ಸಂಘದ ಅಧ್ಯಕ್ಷ ರಾಮನಾಥ ನಾಯ್ಕ, ತದಡಿ ಮೀನುಗಾರರ ಸಂಘ ಅಧ್ಯಕ್ಷ ಮಹೇಶ ಮೂಡಂಗಿ, ಜೈಭೀಮ ಸಂಘಟನೆಯ ಬೊಮ್ಮಯ್ಯ ಹಳ್ಳೇರ, ರಿಕ್ಷಾ ಸಂಘದ ಅಧ್ಯಕ್ಷ ಗೋವಿಂದ ಮುಕ್ರಿ, ಟ್ಯಾಕ್ಷಿ ಸಂಘದ ಅನಂತ ಗೌಡ, ಜಮಾತ್ ಕಮಿಟಿ ಅಧ್ಯಕ್ಷ ಹುಸೇನ್ ರೆಹಮಾನಿ ಇತರರಿದ್ದರು. ಪತ್ರಕರ್ತ ಸುಭಾಷ ಕಾರೇಬೈಲು ನಿರ್ವಹಿಸಿದರು.