

ಬೆಂಗಳೂರು: ಸಮರ್ಥನಂ ಅಂಗವಿಕಲರ ಸಂಸ್ಥೆಯು 27 ವರ್ಷಗಳಿಂದ ಅಂಗವಿಕಲರು, ಹಿಂದುಳಿದವರು ಮತ್ತು ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಅವಿರತವಾಗಿ ದುಡಿಯುತ್ತಿದೆ ಎಂದು ಎಂಎಲ್ಸಿ ರಾಮೋಜಿಗೌಡ ಹೇಳಿದ್ದಾರೆ.
ಸಮರ್ಥನಂ ಅಂಗವಿಕಲರ ಸಂಸ್ಥೆಯಿಂದ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಮರ್ಥನಂ ಸಂಗೀತ ಮತ್ತು ಪ್ರಾದೇಶಿಕ ಕಲೆಗಳ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ, ಜೀವನೋಪಾಯ, ಕೌಶಲ, ಉತ್ತಮ ಪರಿಸರ, ಆರೋಗ್ಯ, ಕ್ರೀಡೆ ಹಾಗೂ ಸಾಂಸತಿಕ ಚಟುವಟಿಕೆಗಳ ಮೂಲಕ ಅಂಗವಿಕಲರ ಸಬಲೀಕರಣಕ್ಕೆ ಕೆಲಸ ಮಾಡುತ್ತಿದೆ ಎಂದು ಬಣ್ಣಿಸಿದರು.
ಸಮರ್ಥನಂ ಟ್ರಸ್ಟ್ ಸಂಸ್ಥಾಪಕ ಡಾ. ಜಿ.ಕೆ.ಮಹಾಂತೇಶ್ ಮಾತನಾಡಿ, ವ್ಯಕ್ತಿಗಳನ್ನು ಸಶಕ್ತಗೊಳಿಸಲು, ಅಡೆತಡೆ ನಿವಾರಣೆಗೆ ಸಂಗೀತ ಔಷಧವಿದ್ದಂತೆ. ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯದ ಮಾನ್ಯತೆಯೊಂದಿಗೆ ಸಂಗೀತ ಮತ್ತು ಪ್ರದರ್ಶಕ ಕಲೆಗಳ ತರಬೇತಿಗಳನ್ನು ಪ್ರಸಕ್ತ ಸಾಲಿನಿಂದ ಪ್ರಾರಂಭಿಸಲಾಗುವುದು. ಕರ್ನಾಟಕ ಶಾಸಿಯ ಸಂಗೀತ, ಹಿಂದುಸ್ತಾನಿ ಸಂಗೀತ, ಭರತನಾಟ್ಯ ನೃತ್ಯ ಸೇರಿ ವಿವಿಧ ಪ್ರಕಾರಗಳ ವಾದ್ಯಗಳ ತರಬೇತಿ ನೀಡಲಾಗುವುದು ಎಂದರು. ಎಂಎಲ್ಸಿ ಗೋಪಿನಾಥ್ ರೆಡ್ದಿ , ಪ್ರೊ. ನಾಗೇಶ್ ಬೆಟ್ಟಕೋಡೆ ಮತ್ತಿತರರಿದ್ದರು.