

ಬಾದಾಮಿ: ದೇಶದಲ್ಲಿ ಆರ್ಥಿಕವಾಗಿ ರೈತರು ಸಬಲರಾಗಲಿ ಎಂದು ಸ್ವಾತಂತ್ರೃ ಸಿಗುವ ಪೂರ್ವದಲ್ಲಿ ದಿ.ಸಿದ್ದನಗೌಡ ಕನಗಿನಹಾಳ ಸಹಕಾರಿ ತತ್ವ ಹುಟ್ಟು ಹಾಕಿದರು.
ಅಂದಿನಿಂದ ಇಲ್ಲಿಯವರೆಗೆ ಸಹಕಾರಿ ಕ್ಷೇತ್ರ ಬೆಳೆದು ಹೆಮ್ಮರವಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಗೋಡಾವನ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿ, ದೇಶದಲ್ಲಿ ಶೇ.70ರಷ್ಟು ಜನರು ಕೃಷಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ.
ರೈತರು ಸಶಕ್ತರಾಗಲು ಸಹಕಾರಿ ಕಾಯ್ದೆಯನ್ನು ಜಾರಿಗೊಳಿಸಿ ಕೇಂದ್ರ ಸರ್ಕಾರ ಆ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸುತ್ತಿದೆ. ಸಹಕಾರಿ ಕ್ಷೇತ್ರದಿಂದ ದೇಶದ ಅಭಿವೃದ್ಧಿಯಾಗುತ್ತಿದೆ.
ನಾವು ಸಣ್ಣವರಿದ್ದಾಗ ಪಿಕೆಪಿಎಸ್‌ನಲ್ಲಿ 1500ರೂ. ಸಾಲ ಪಡೆಯಬೇಕಾದರೆ 6 ತಿಂಗಳು ಅಲೆಯಬೇಕಾಗುತ್ತಿತ್ತು. ಇವತ್ತು ರೈತರಿಗೆ 5 ಲಕ್ಷದವರೆಗೆ ಬಡ್ಡಿ ರಹಿತ ಸಾಲ ದೊರೆಯುತ್ತಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಇದನ್ನೂ ಓದಿ: ಮಕ್ಕಳನ್ನು ಬಾವಿಗೆ ತಳ್ಳಿದ ತಾಯಿ!
ನಾನು ಚುನಾವಣೆಯಲ್ಲಿ ಸೋತ ನಂತರ ನನ್ನನ್ನು ಸಾರ್ವಜನಿಕ ಕಾರ್ಯಕ್ರಮಕ್ಕೆ ಮೊದಲಿಗೆ ಕರೆದವರು ಜಾಲಿಹಾಳ ಗ್ರಾಮದವರು ಎಂದು ಹೇಳಲು ನನಗೆ ಸಂತೋಷವೆನಿಸುತ್ತದೆ.
ನನ್ನ ಅಧಿಕಾರ ಅವಧಿಯಲ್ಲಿ ಜಾಲಿಹಾಳ ಭಾಗಕ್ಕೆ ಸೇರಿ ಅಂದಾಜು 30 ಕೋಟಿ ರೂ. ಅನುದಾನ ಮಂಜೂರು ಮಾಡಿಸಿರುವೆ. ತಾಯಿ ಬನಶಂಕರಿ ದೇವಾಸ್ಥಾನ ಹತ್ತಿರ ಬೀದಿ ದೀಪ, ಸಿಸಿ ರಸ್ತೆ ಸೇರಿ ವಿವಿಧ ಕಾಮಗಾರಿಗಳನ್ನು ಮಾಡಿಸಿದ್ದೇನೆ ಎಂದು ಹೇಳಿದರು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಮಾತನಾಡಿ, ಸಹಕಾರಿ ಕ್ಷೇತ್ರ ಉತ್ತಮ ಕ್ಷೇತ್ರ. ಸಹಕಾರಿ ಸಂಘಗಳು ಉತ್ತಮವಾಗಿ ಕಾರ್ಯ ಮಾಡುತ್ತಿವೆ. ಕೃಷಿ, ಕೃಷಿಯೇತರ ಚಟುವಟಿಕೆಗೆ ಸಾಲ ನೀಡಲಾಗಿದೆ.
ಇದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ. ಎಲ್ಲರೂ ಸಹಕಾರಿ ಸಂಘಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಎಲ್.ಬಿ ಕುರ್ತಕೋಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಾಲಿಹಾಳ ಪಿಕೆಪಿಎಸ್ ಅಧ್ಯಕ್ಷ ಸಿದ್ದನಗೌಡ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು 2290 ಸದಸ್ಯರನ್ನು ಹೊಂದಿದೆ. 1301 ಠೇವಣಿದಾರರಿಂದ 1889.39 ಲಕ್ಷ ಸಂಗ್ರಹ, ಬಾಗಲಕೋಟೆ ಬಿಡಿಸಿಸಿ ಬ್ಯಾಂಕಿನಲ್ಲಿ 576 ಲಕ್ಷ ರೂ. ಠೇವಣಿ ಹೂಡಿಕೆ ಮಾಡಿದೆ.
ಸಂಘವು ಪ್ರತಿ ವರ್ಷ ಲಾಭದಲ್ಲಿ ಕಾರ್ಯನಿರ್ವಹಿಸುತ್ತಿದ್ದು, 2022-23 ನೇ ಸಾಲಿನಲ್ಲಿ 23.45ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಹೇಳಿದರು.
ಹಾಲಕೆರೆ ಸಂಸ್ಥಾನ ಮಠದ ಮುಪ್ಪಿನ ಬಸವಲಿಂಗ ದೇವರು, ಜಾಲಿಹಾಳ ಶಿವಾನಂದ ಮಠದ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಅತಿಥಿಗಳ ಕೊಠಡಿಗಳನ್ನು ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಉದ್ಘಾಟಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಮಾರಗೌಡ ಜನಾಲಿ, ಸಹಕಾರ ಭಾರತಿ ಅಧ್ಯಕ್ಷ ರಾಜಶೇಖರ ಶೀಲವಂತರ, ಎಸ್.ಆರ್.ಮೆಳ್ಳಿ, ಹನುಮಂತ ಮಾವಿನಮರದ, ಎಂ.ಬಿ.ಹಂಗರಗಿ, ಪಿ.ಆರ್.ಗೌಡರ, ಗ್ರಾಪಂ ಅಧ್ಯಕ್ಷೆ ಜಯಶ್ರೀ ಪಾಟೀಲ, ಎ್.ಆರ್.ಪಾಟೀಲ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೌನೇಶ ಬಡಿಗೇರ ಸೇರಿ ಎಲ್ಲ ನಿರ್ದೇಶಕರು, ಗ್ರಾಪಂ ಸದಸ್ಯರು ಇದ್ದರು.
ಸದಸ್ಯ ಯುನೂರ ಕರಿಯಣ್ಣವರ ಸ್ವಾಗತಿಸಿದರು. ವೀರಭದ್ರಪ್ಪ ಸೂಡಿ ನಿರೂಪಿಸಿ ವಂದಿಸಿದರು.