

ವಿಜಯವಾಣಿ ಸುದ್ದಿಜಾಲ ಧಾರವಾಡ
ನೆಲ ಅಂದರೆ ಭೂಮಿಯನ್ನು ತಾಯಿಯಂತೆ ಗೌರವಿಸುವ ಜಗತ್ತಿನ ಏಕೈಕ ರಾಷ್ಟ್ರ ಭಾರತ. ಅಂತಹ ದೇಶವಾಸಿಗಳಾದ ನಾವೆಲ್ಲ ಪುಣ್ಯವಂತರು. ಭಾರತೀಯ ನಾಗರಿಕರಾದ ನಾವೆಲ್ಲರೂ ದೇಶದ ಏಳಿಗೆಯಲ್ಲಿ ಒಟ್ಟಿನಿಂದ ಶ್ರಮಿಸಬೇಕು. ಒಂದಾಗಿ ದುಡಿದರೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಡಿಮ್ಹಾನ್ಸ್ ಮನೋ ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಪಾಟೀಲ ಹೇಳಿದರು.
ನಾಗಪುರದ ದಕ್ಷಿಣ ಮಧ್ಯ ಸಾಂಸ್ಕೃತಿಕ ಕೇಂದ್ರ, ಭೂಮಿ ಪ್ರತಿಷ್ಠಾನ, ಬೀದರಿನ ಕರ್ನಾಟಕ ಸಾಹಿತ್ಯ ಸಂಘ ಹಾಗೂ ಮಹಾತ್ಮಾ ಗಾಂಧಿ ಕೆಎಎಸ್ ಮತ್ತು ಪಿಎಸ್‌ಐ ಅಕಾಡೆಮಿ ಸಹಯೋಗದಲ್ಲಿ ಇತ್ತೀಚೆಗೆ ಅಕಾಡೆಮಿಯಲ್ಲಿ ಏರ್ಪಡಿಸಿದ್ದ ‘ನನ್ನ ಮಣ್ಣು ನನ್ನ ದೇಶ’ ಅಭಿಯಾನ ಅಮೃತ ಕಳಶ ಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಕಾಡೆಮಿ ನಿರ್ದೇಶಕ ಜ್ಞಾನೇಶ್ವರ ಬನಶಂಕರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭೂಮಿ ಪ್ರತಿಷ್ಠಾನ ಅಧ್ಯಕ್ಷ ಡಾ. ಶಿವಾನಂದ ಟವಳಿ ಮಾತನಾಡಿ, ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮವು ದೇಶಾಭಿಮಾನ ಮೂಡಿಸುವ ಅಭಿಯಾನವಾಗಿದ್ದು, ರಾಷ್ಟ್ರವ್ಯಾಪಿ ನಡೆಯುತ್ತಿದೆ. ದೆಹಲಿಯ ಕರ್ತವ್ಯ ಪಥದಲ್ಲಿ ಹುತಾತ್ಮರ ಗೌರವಾರ್ಥ ನಿರ್ಮಿಸಲಿರುವ ಅಮೃತ ಉದ್ಯಾನವನದಲ್ಲಿ ಸಸ್ಯಗಳ ಪೋಷಣೆಗೆ ಈ ಅಭಿಯಾನದ ಮೂಲಕ ಸಂಗ್ರಹಿಸಿದ ಮಣ್ಣನ್ನು ಬಳಸಲಾಗುತ್ತಿದೆ ಎಂದರು.
ಡಾ. ದುಂಡಪ್ಪ ಬಡಲಕ್ಕಣ್ಣವರ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಶರಣು ಅಣ್ಣಿಗೇರಿ, ತುಕಾರಾಮ ನಾಯಕ, ರುದ್ರೇಗೌಡ, ಶಿವಾನಂದ ಸಂಪಗಾಂವ, ಇತರರು ಇದ್ದರು.