

ಸಾಲಿಗ್ರಾಮ: ಗಾಯನಹಳ್ಳಿ ಗ್ರಾಮದಲ್ಲಿ 5 ಲಕ್ಷ ರೂ. ಅನುದಾನದಲ್ಲಿ ಕೆಂಪರಾಮಲಿಂಗೇಶ್ವರ ದೇವಸ್ಥಾನದ ಸುತ್ತ ಕಾಂಕ್ರೀಟ್ ಕಾಮಗಾರಿಗೆ ಬುಧವಾರ ಶಾಸಕ ಡಿ.ರವಿಶಂಕರ್ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿ, ಗ್ರಾಮಗಳಲ್ಲಿ ತುರ್ತಾಗಿ ಆಗಬೇಕಿರುವ ದೇವಸ್ಥಾನಗಳ ಪಟ್ಟಿಯನ್ನು ನೀಡಿ, ಹಂತ ಹಂತವಾಗಿ ಎಲ್ಲ ದೇವಸ್ಥಾನಗಳನ್ನು ಅಭಿವೃದ್ಧಿಪಡಿಸೋಣ ಎಂದರು.
ಗ್ರಾಮದಲ್ಲಿ ಮುಜರಾಯಿ ಇಲಾಖೆಯ ಕೆಂಪರಾಮಲಿಂಗೇಶ್ವರ ದೇವಸ್ಥಾನ ಇದ್ದು, ಎಲ್ಲಿ ಮಳೆ ನೀರಿನಿಂದ ಕೆಸರುಗದ್ದೆ ಆಗುತ್ತಿತ್ತು. ಇದರ ಅಭಿವೃದ್ಧಿ ಮಾಡಬೇಕು ಎಂದು ನಾನು ಜನ ಆಶೀರ್ವಾದ ಕಾರ್ಯಕ್ರಮಕ್ಕೆ ಆಗಮಿಸಿದಾಗ ಗ್ರಾಮಸ್ಥರು ಬೇಡಿಕೆ ಇಟ್ಟಿದ್ದರು. ಅದರಂತೆ 5 ಲಕ್ಷ ರೂ. ಅನುದಾನ ನೀಡಿ, ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಾಲಿಗ್ರಾಮ, ಹೊನ್ನೇನಹಳ್ಳಿ, ಕೆಡಗ, ಹನಸೋಗೆ ಹಾಗೂ ಗಾಯನಹಳ್ಳಿ ಪಶುಪತಿ ಮಾರ್ಗವಾಗಿ ರಸ್ತೆ ಅಭಿವೃದ್ಧಿಪಡಿಸಲು ಈಗಾಗಲೇ ಸರ್ಕಾರಕ್ಕೆ ಕ್ರಿಯಯೋಜನೆ ಕಳುಹಿಸಲಾಗಿದೆ. ಶೀಘ್ರದಲ್ಲೇ ಅನುದಾನ ಬಿಡುಗಡೆ ಆಗಲಿದ್ದು, ಜನರ ಬಹುದಿನದ ಬೇಡಿಕೆ ಈಡೇರಲಿದೆ ಎಂದು ತಿಳಿಸಿದರು.
ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದ್ದು, ಪೂರ್ಣಗೊಳ್ಳಲು ಉಳಿದ ಅನುದಾನವನ್ನು ನೀಡಲಾಗುವುದು. ಉಳಿದ ಕಾಮಗಾರಿಗೆ ಕ್ರಿಯಾಯೋಜನೆ ತಯಾರಿಸಿ ಎಂದು ಸಮಾಜದ ಮುಖಂಡರಿಗೆ ತಿಳಿಸಿದರು.
ಗ್ರಾಮದಲ್ಲಿ ನಾಲೆ ಏರಿ ರಸ್ತೆ ಗಳು ಒತ್ತುವರಿಯಾಗಿದ್ದು, ರೈತರ ಸಂಚಾರಕ್ಕೆ ತೊಂದರೆಯಾಗಿದೆ. ಒತ್ತುವರಿ ತೆರವುಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಿ ಎಂದು ಜನರು ಮಾಡಿದ ಮನವಿಗೆ ಶಾಸಕರು, ಸ್ಥಳದಲ್ಲೇ ಇದ್ದ ತಹಸಿಲ್ದಾರ್ ರುಕಿಯಾ ಬೇಗಂ ಅವರಿಗೆ ಕ್ರಮ ಕೈಗೊಳ್ಳಲು ಸೂಚಿಸಿದರು.
ವಿಧವಾ ವೇತನ, ವೃದ್ಧರ ವೇತನ, ಸಂಧ್ಯಾ ಸುರಕ್ಷಾ, ಪೌತಿಖಾತೆ, ಇ-ಸ್ವತ್ತುನಂತಹ ಸೌಲಭ್ಯ ಸ್ಥಳೀಯ ಮಟ್ಟದ ಅಧಿಕಾರಿಗಳ ಹಂತದಲ್ಲೇ ಬಗೆಹರಿಯಬೇಕು. ಪದೇ ಪದೆ ಇಲಾಖೆಗೆ ಜನರು ಅಲೆದಾಡಿಸಬಾರದು ಗ್ರಾಮಗಳಿಗೆ ನಮ್ಮೊಂದಿಗೆ ಆಗಮಿಸುವ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ಆಗಬೇಕಾಗಿರುವ ಮತ್ತು ಆಗಿರುವ ಕೆಲಸಗಳನ್ನು ಗ್ರಾಮಸ್ಥರ ಮುಂದೆ ತಿಳಿಸಬೇಕು ಎಂದು ತಾಕೀತು ಮಾಡಿದರು. ನಂತರ ವೃದ್ಧಾಪ್ಯ, ವಿಧವಾ ಮತ್ತು ಸಂಧ್ಯಾ ಸುರಕ್ಷಾ ಮಂಜೂರಾತಿ ಪತ್ರವನ್ನು ಫಲಾನುಭವಿಗಳಿಗೆ ವಿತರಿಸಿದರು.
ಸಂದರ್ಭದಲ್ಲಿ ತಹಸೀಲ್ದಾರ್ ರುಕಿಯಾಬೇಗಂ, ಇಒ ರವಿಶಂಕರ್, ಸೆಸ್ಕ್ ಎಇಇ ಮಧುಸೂಧನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ಕಾಂಗ್ರೆಸ್ ನಗರ ಅಧ್ಯಕ್ಷ ಪ್ರಭಾಕರ್, ಮಾಜಿ ತಾಪಂ ಅಧ್ಯಕ್ಷ ಹರದನಹಳ್ಳಿ ಮಂಜಪ್ಪ, ಸಾಲಿಗ್ರಾಮ ಚಂದು, ಗ್ರಾಪಂ ಸದಸ್ಯ ಹೇಮಂತ್, ಜ್ಯೋತಿ ಪ್ರಕಾಶ್, ಶಂಭುಲಿಂಗಚಾರಿ, ವಿಎಸ್‌ಎಸ್ ಮಾಜಿ ಅಧ್ಯಕ್ಷ ನಟರಾಜ್, ಮಾಜಿ ಗ್ರಾಪಂ ಅಧ್ಯಕ್ಷ ತೇಜಮೂರ್ತಿ, ಗಾಯನಹಳ್ಳಿ ನಟರಾಜ್, ಕುಮಾರಸ್ವಾಮಿ, ಸುನೀಲ್, ಮಂಜೇಗೌಡ, ಬಳ್ಳೂರು ಬೀರೇಶ್, ಗ್ಯಾರಂಟಿ ಸಮಿತಿ ಸದಸ್ಯ ಮೂರ್ತಿ, ಮುದುಗುಪ್ಪೆ ಮಹದೇವ್, ಪಿಡಿಒ ನವೀನ್, ಕಾರ್ತಿಕ್, ವಿ.ಎ.ಶಶಿಕಾಂತ್ ಸೇರಿದಂತೆ ಇತರರು ಇದ್ದರು.