

ಮುಳಬಾಗಿಲು: ಹಂತ ಹಂತವಾಗಿ ಎಲ್ಲ ಗ್ರಾಮೀಣ ರಸ್ತೆಗಳ ಅಭಿವೃದ್ಧಿಯನ್ನು ಪೂರ್ಣಗೊಳಿಸಲಾಗುವುದು. ರಾ. ಹೆ- 75ರ ನಲ್ಲೂರು ಗೇಟ್ನಿಂದ ಎಂ. ಅಗ್ರಹಾರ ಕ್ರಾಸ್ ವರೆಗೂ, ಹೆದ್ದಾರಿಯ ಹನುಮನಹಳ್ಳಿ ಗೇಟ್ನಿಂದ ಹನುಮನಹಳ್ಳಿ ಲಿಂಕ್ ರಸ್ತೆ, ಉತ್ತನೂರು ಗ್ರಾಮದಿಂದ ಶ್ರೀನಿವಾಸಪುರ ರಸ್ತೆಯ ಉತ್ತನೂರು ಕ್ರಾಸ್ವರೆಗೂ ಮುಂದಿನ ಹಂತದಲ್ಲಿ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಸಮೃದ್ಧಿ ವಿ.ಮಂಜುನಾಥ್ ತಿಳಿಸಿದರು.
ತಾಲೂಕಿನ ಹನುಮನಹಳ್ಳಿಯಿಂದ ವಾಣಿಗಾನಹಳ್ಳಿ ವರೆಗಿನ 2 ಕಿ.ಮೀ.ರಸ್ತೆಯ ಎರಡು ಕೋಟಿ ರೂ. ವೆಚ್ಚದ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಹನುಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದು, ಈ ರಸ್ತೆಗಳು ಪೂರ್ಣಗೊಂಡರೆ ಸಂಪೂರ್ಣ ರಸ್ತೆ ಸಂಪರ್ಕ ಬಹುತೇಕ ಪೂರ್ಣಗೊಳ್ಳುತ್ತದೆ ಎಂದರು.
ಮುಳಬಾಗಿಲು ಶ್ರೀನಿವಾಸಪುರ ರಾ.ಹೆ. 234ಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಪೂರ್ಣಗೊಂಡರೆ ಉತ್ತನೂರು ಮತ್ತು ಹನುಮನಹಳ್ಳಿ ಗ್ರಾಮ ಪಂಚಾಯಿತಿಗಳು ಬಹುತೇಕ ಎರಡು ಹೆದ್ದಾರಿಗಳ ಸಂಪರ್ಕ ಕೊಂಡಿಯಾಗಲಿದೆ ಎಂದರು.
ಹನುಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಲೇರಿ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದ ಸಹಕಾರಿ ಹಾಲಿನ ಡೇರಿ ಕಟ್ಟಡಕ್ಕೆ ಹಾಗೂ ಮೇಲೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಲಾಯಿತು.
ಜೆಡಿಎಸ್ ಮುಖಂಡರಾದ ಬಲಶೆಟ್ಟಹಳ್ಳಿ ಬಿ.ಎಂ.ವೆಂಕಟರಮಣಗೌಡ, ಎಚ್. ಗೊಲ್ಲಹಳ್ಳಿ ಜಿ.ಎಸ್.ಜಗದೀಶ್, ಹನುಮನಹಳ್ಳಿ ಗ್ರಾಪಂ ಅಧ್ಯಕ್ಷೆ ಬೀಮಾಪುರ ಬಿ.ಎಸ್. ಶಶಿಕಲಾ, ಮೇಲೇರಿ ಗ್ರಾಪಂ ಸದಸ್ಯ ಎನ್. ರಮೇಶ್, ಪಿಡಬ್ಲ್ಯೂಡಿ ಎಇಇ ಮೂಡಲಗಿರಿ, ಮುಖಂಡರಾದ ಬಂಡಹಳ್ಳಿ ಲಕ್ಷಿ$್ಮನಾರಾಯಣ, ಹನುಮನಹಳ್ಳಿ ಶಂಕರಪ್ಪ, ನಾರಾಯಣಸ್ವಾಮಿ, ಮಾರಪ್ಪ, ರಾಜಶೇಖರ್, ನಾಚಪ್ಪ, ಡೇರಿ ಅಧ್ಯಕ್ಷ ನಾಗರಾಜ್, ಗ್ರಾಪಂ ಕಾರ್ಯದರ್ಶಿ ಶಾರದಮ್ಮ, ಬಿಲ್ ಕಲೆಕ್ಟರ್ ಶ್ರೀನಿವಾಸ್, ಕಂಪ್ಯೂಟರ್ ಆಪರೇಟರ್ ಅಂಬಿಕಾ ಮತ್ತಿತರರು ಇದ್ದರು.