ಸಹಕಾರಿ ಸಂಘದಿಂದ ಗ್ರಾಮೀಣ ಜನರ ಅಭಿವೃದ್ಧಿ

AKR SAHAKARI
Published on

ಅಕ್ಕಿಆಲೂರ: ಗ್ರಾಮೀಣ ಭಾಗದ ರೈತರಿಗೆ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಪತ್ತಿನ ಸಂಘ ಜೀವನಾಡಿಯಾಗಿದೆ. ಈ ನಿಟ್ಟಿನಲ್ಲಿ ಸಂಘದ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತೇನೆ ಎಂದು ಸಂಘದ ನೂತನ ಅಧ್ಯಕ್ಷ ಮಲ್ಲಿಕಾರ್ಜುನಪ್ಪ ಭಾಗಣ್ಣನವರ ಹೇಳಿದರು.

ಸಮೀಪದ ಹೇರೂರ ಗ್ರಾಮದಲ್ಲಿ ಬುಧವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನೂತನ ನಿರ್ದೇಶಕರ ಚುನಾವಣೆ ಫಲಿತಾಂಶದ ಬಳಿಕ ಅವರು ಮಾತನಾಡಿದರು.

ಸಣ್ಣ ಸಾಲ ಸೌಲಭ್ಯ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪಿಸಿದರೆ ಮಾತ್ರ ಯೋಜನೆ ಸಾಕಾರವಾಗಲು ಸಾಧ್ಯ. ಸರ್ಕಾರದ ಯೋಜನೆಗಳು ಪ್ರಚಾರದ ಕೊರತೆಯಿಂದ ಜನರಿಗೆ ತಲುಪುತ್ತಿಲ್ಲ. ಮಹತ್ವಾಕಾಂಕ್ಷಿ ಯೋಜನೆಗಳನ್ನು ರೈತರಿಗೆ ತಲುಪಿಸುವ ಮಹತ್ವದ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿದೆ. ಅವರು ಅದನ್ನು ಅರಿತುಕೊಳ್ಳಬೇಕು ಎಂದರು.

ಉಪಾಧ್ಯಕ್ಷ ಶಿವನಗೌಡ ಗೋರೆಗೌಡರ ಮಾತನಾಡಿದರು.

ಇದಕ್ಕೂ ಮುನ್ನ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮೀಸಲಿದ್ದ ಹಿಂದುಳಿದ ‘ಬ’ ವರ್ಗಕ್ಕೆ ಮಲ್ಲಿಕಾರ್ಜುನಪ್ಪ ಭಾಗಣ್ಣನವರ, ಸಾಮಾನ್ಯ ವರ್ಗದ ಉಪಾಧ್ಯಕ್ಷ ಮೀಸಲು ಸ್ಥಾನಕ್ಕೆ ಶಿವನಗೌಡ ಗೋರೆಗೌಡ ಅವಿರೋಧವಾಗಿ ಆಯ್ಕೆಯಾದರು. ನಿರ್ದೇಶಕರಾಗಿ ಪುಟ್ಟನಗೌಡ ಮಾಳಗಿ, ಪಡವೇಶಪ್ಪ ಗುಳಪಣ್ಣನವರ, ಬಸವರಾಜ ಪಿಲ್ಲಿಕಟ್ಟಿ, ಮಲ್ಲನಗೌಡ ಹಂಚಿನಮನಿ, ಕಮಲವ್ವ ಭಾಗಣ್ಣನವರ, ಮಲ್ಲವ್ವ ಸುರಳೇಶ್ವರ, ಸುರೇಶ ಸುಣಗಾರ, ಸುಬ್ಬಣ್ಣ ಮಲ್ಲಿಗಾರ, ಜೀವಪ್ಪ ನರೇಗಲ್ಲ, ಶಿವನಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾದರು. ಜಿಪಂ ಮಾಜಿ ಸದಸ್ಯ ಮಹಾದೇವಪ್ಪ ಬಾಗಸರ, ಗ್ರಾಪಂ ಅಧ್ಯಕ್ಷ ಗುಂಡನಗೌಡ ಪಾಟೀಲ, ಸಿ.ಪಿ. ಬಾಸೂರ, ಪ್ರಕಾಶ ಬಣಕಾರ, ಬೊಮ್ಮಲಿಂಗಪ್ಪ ನಿಂಬನಗೌಡ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net