ಅನೈರ್ಮಲ್ಯ ತೊಡೆಯಲು ರಸ್ತೆ, ಚರಂಡಿ ಅಭಿವೃದ್ಧಿ

ಅನೈರ್ಮಲ್ಯ ತೊಡೆಯಲು ರಸ್ತೆ, ಚರಂಡಿ ಅಭಿವೃದ್ಧಿ
Published on

ಕೊಳ್ಳೇಗಾಲ: ತಾಲೂಕಿನ ಪಾಳ್ಯ ಗ್ರಾಮದ ಪರಿಶಿಷ್ಟ ಜಾತಿ ಸಮುದಾಯದ ಬೀದಿಯಲ್ಲಿ ಸೋಮವಾರ 1 ಕೋಟಿ ರೂ. ವೆಚ್ಚದ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಹನೂರು ಶಾಸಕ ಎಂ.ಆರ್. ಮಂಜುನಾಥ್ ಚಾಲನೆ ನೀಡಿದರು.

ಪರಿಶಿಷ್ಟ ಜಾತಿ ಜನರು ವಾಸವಿರುವ ಬೀದಿಗಳ ರಸ್ತೆ ಹಾಗೂ ಚರಂಡಿಗಳನ್ನು ಅಭಿವೃದ್ಧಿ ಪಡಿಸಬೇಕು. ಗ್ರಾಮದಲ್ಲಿ ಅನೈರ್ಮಲ್ಯ ತೊಡೆದು ಹಾಕಬೇಕು ಎಂಬ ಉದ್ದೇಶದಿಂದ ಎಸ್‌ಇಪಿ ಯೋಜನೆಯಡಿ ಬಡಾವಣೆಯ 9 ಕಡೆಗಳಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ ಎಂದರು.

ಗ್ರಾಮ ಅಭಿವೃದ್ಧಿಯಾಗಬೇಕು. ಚರಂಡಿ ಹಾಗೂ ರಸ್ತೆಗಳಾದರೆ ಬಡಾವಣೆಯಲ್ಲಿ ಸ್ವಚ್ಛತೆ ಕಾಪಾಡಬಹುದಾಗಿದೆ. ಕಾಮಗಾರಿಯನ್ನು ಅಚ್ಚುಕಟ್ಟಾಗಿ ನಡೆಸುವ ಮೂಲಕ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಬೇಕೆಂದು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಉಗನಿಯ-ಸತ್ತೇಗಾಲ ಮಾರ್ಗದ ರಸ್ತೆಯ ಅಭಿವೃದ್ಧಿಗೆ ಚಾಲನೆ ನೀಡುವ ಭರವಸೆ ನೀಡಿದರು. ಪಾಳ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ, ಸದಸ್ಯರಾದ ಮಹದೇವಮ್ಮ, ಲಕ್ಷ್ಮೀ, ಪಿಡಿಒ ಜುನೈದ್ ಅಹಮ್ಮದ್, ಮಂಜೇಶ್, ನಿರ್ಮಿತಿ ಕೇಂದ್ರ ಇಲಾಖೆ ಯೋಜನಾ ವ್ಯವಸ್ಥಾಪಕ ರವಿಕುಮಾರ್, ಗೋಪಾಲನಾಯಕ, ಸಲ್ಮಾನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net