ಗತಿಶಕ್ತಿ ಯೋಜನೆಯಲ್ಲಿ ರೈಲ್ವೆ ನಿಲ್ದಾಣ ಅಭಿವೃದ್ಧಿ

27 BIRUR 01
Published on

ಬೀರೂರು: ಗತಿಶಕ್ತಿ ಯೋಜನೆಯಡಿಜಿ ಕಡೂರು ಮತ್ತು ಬೀರೂರು ರೈಲ್ವೆ ನಿಲ್ದಾಣಗಳ ಸಮಗ್ರ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು ಎಂದು ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ಗುರುವಾರ ಸಂಜೆ ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್ ನಿವಾಸಕ್ಕೆ ಭೇಟಿ ನೀಡಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, 75 ವರ್ಷಗಳಲ್ಲಿ ಸಾಧ್ಯವಾಗದ ರೈಲ್ವೆ ಇಲಾಖೆಯ ಹಲವಾರು ಅಭಿವೃದ್ಧಿ ಕಾರ್ಯಗಳು 10 ವರ್ಷಗಳಲ್ಲಿ ಪ್ರಗತಿ ಸಾಧಿಸಿದೆ. ತುಮಕೂರು-ದಾವಣಗೆರೆ-ಚಿತ್ರದುರ್ಗ ರೈಲ್ವೆ ನಿಲ್ದಾಣಗಳಿಗೆ ನೇರ ಲೈನ್ ನಿರ್ಮಾಣಕ್ಕೆ 1500 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ. ರಾಯದುರ್ಗ, ಪಾವಗಡ, ಮಧುಗಿರಿ ಮಾರ್ಗ ಮೂಲಕ ಆಂಧ್ರ ಪ್ರದೇಶಕ್ಕೆ ತೆರಳಲು ಮಾರ್ಗ ಸಿದ್ದವಾಗಿದೆ. ರೈಲ್ವೆ ಯೋಜನೆಗಳಿಗೆ 45 ಸಾವಿರ ಕೋಟಿ ರೂ.ಬಿಡುಗಡೆಯಾಗಿದ್ದು, ನೆನಗುದಿಗೆ ಬಿದ್ದ ಎಲ್ಲ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಚಿಕ್ಕಮಗಳೂರು ಜಿಲ್ಲಾ ರೈಲ್ವೆ ಪ್ರಯಾಣಿಕರ ಅಸೋಸಿಯೇಷನ್ ಸದಸ್ಯ ವಿ.ಜಿ.ವೆಂಕಟೇಶ್ ಒಡೆಯರ್ ಮಾತನಾಡಿ, ಬೀರೂರು ರೈಲ್ವೆ ಜಂಕ್ಷನ್ ಶತಮಾನಗಳನ್ನು ದಾಟಿದ್ದು, ವಿವಿಧ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಕೊಂಡಿಯಾಗಿದೆ. ಈ ನಿಲ್ದಾಣವನ್ನು ಅಮೃತ್ ಭಾರತ್ ಯೋಜನೆಯ 2ನೇ ಹಂತದಲ್ಲಿ ಸೇರ್ಪಡೆಗೊಳಿಸಿ ಅಭಿವೃದ್ಧಿಪಡಿಸಬೇಕು. ವಿಐಪಿ ಲಾಂಚ್ ನಿರ್ಮಾಣ, 4 ಮತ್ತು 5ನೇ ಫ್ಲಾಟ್‌ಫಾರ್ಮ್ ಗೆ ಲಿಫ್ಟ್, ರೈಲ್ವೆ ಪೊಲೀಸ್ ಠಾಣೆ ಪ್ಲಾಟ್‌ಫಾರ್ಮ್‌ಗೆ ವರ್ಗಾವಣೆ, ಸಂಪರ್ಕ ಕ್ರಾಂತಿ ಸೇರಿದಂತೆ ಸೂಪರ್ ಫಾಸ್ಟ್ ರೈಲುಗಳ ನಿಲುಗಡೆಗೆ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.
ಪುರಸಭೆ ಅಧ್ಯಕ್ಷೆ ವನಿತಾ ಮಧು ಬಾವಿಮನೆ ಮಾತನಾಡಿ, ಬಿ.ಕೋಡಿಹಳ್ಳಿ ಗ್ರಾಮಕ್ಕೆ ತೆರಳುವ ಬ್ರಿಡ್ಜ್ ಅಗಲೀಕರಣ, ಸಂತೆ ಮಾರ್ಕೆಟ್ ರಸ್ತೆಯಲ್ಲಿ ರೈಲ್ವೆ ಮಾರ್ಗಕ್ಕೆ ಅಂಡರ್ ಪಾಸ್ ನಿರ್ಮಿಸಬೇಕು ಎಂದು ಮನವಿ ಮಾಡಿದರು.
ಶಾಸಕ ಕೆ.ಎಸ್.ಆನಂದ್, ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಸಚಿವರಿಗೆ ಗೌರವ ಸಲ್ಲಿಸಿದರು. ಮಾಜಿ ಶಾಸಕ ಡಿ.ಎಸ್.ಸುರೇಶ್, ದೇವರಾಜ್ ಶೆಟ್ಟಿ, ಎಂ.ಎಲ್.ಮೂರ್ತಿ, ಬೀರೂರು ದೇವರಾಜ್, ಕೆ.ಆರ್.ಆನಂದಪ್ಪ, ಶೆಟ್ಟಿಹಳ್ಳಿ ರಾಮಪ್ಪ, ಎಂ.ಮರುಳಸಿದ್ದಪ್ಪ, ನಂದ ಕಿಶೋರ್ ಮಾಲು, ಎಂ.ಪಿ.ಸುದರ್ಶನ, ಮಾರ್ಗದ ಮಧು, ಎನ್.ಎಂ.ನಾಗರಾಜ್, ಕೆ.ಎಂ.ವಿನಾಯಕ, ಜಯಣ್ಣ, ಬೊಮ್ಮಣ್ಣ, ವಿನಯ್, ಬಿ.ಪಿ.ದೇವಾನಂದ, ಜಿ.ಲಕ್ಷ್ಮಣ್, ರಘು, ಲೋಕೇಶಪ್ಪ, ಸಹನ ವೆಂಕಟೇಶ್, ಸವಿತಾ ರಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net