

ಮಡಿಕೇರಿ: ಜನತಾದಳ(ಜಾತ್ಯಾತೀತ) ರಾಜ್ಯಸಭೆ ಸದಸ್ಯ ಕುಪ್ಪೇಂದ್ರ ರೆಡ್ಡಿ ಬಿಡುಗಡೆ ಮಾಡಿರುವ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ದೇವಾಲಯ ವ್ಯವಸ್ಥಾಪನಾ ಸಮಿತಿ ಹಾಗೂ ದೇವಾಲಯ ಭಕ್ತ ಜನಸಂಘ ಮೂಲಕ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ.
ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಾಲಯ ಉಸ್ತುವಾರಿಯನ್ನು ಸರ್ಕಾರದಿಂದ ನೇಮಕಗೊಂಡ ದೇವಾಲಯ ವ್ಯವಸ್ಥಾಪನಾ ಸಮಿತಿ ಹಾಗೂ ಭಕ್ತರನ್ನೊಳಗೊಂಡ ಭಕ್ತ ಜನಸಂಘ ನಿರ್ವಹಿಸುತ್ತಿದೆ. ಮಳೆ ದೇವರೆಂದು ಪ್ರಖ್ಯಾತಿ ಹೊಂದಿರುವ ಇಗ್ಗುತ್ತಪ್ಪ ದೇವಾಲಯಕ್ಕೆ ನಿತ್ಯ ಭಕ್ತರು ಭೇಟಿ ನೀಡುತ್ತಾರೆ. ಮಗುವಿನ ನಾಮಕರಣ ಸೇರಿದಂತೆ ವಿವಿಧ ಶುಭ ಕಾರ್ಯ ಇಲ್ಲಿ ನಡೆಯುತ್ತದೆ. ತುಲಾಭಾರ ಸೇವೆಗೆ ದೇವಾಲಯ ಪ್ರಖ್ಯಾತಿ ಹೊಂದಿದೆ. ನಿತ್ಯ ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಗುತ್ತದೆ.
ಇಗ್ಗುತ್ತಪ್ಪ ದೇವರ ಭಕ್ತರಾಗಿರುವ ಕುಪ್ಪೇಂದ್ರರೆಡ್ಡಿ ತಮ್ಮ ಕೋರಿಕೆ ಈಡೇರಿದ ಹಿನ್ನೆಲೆಯಲ್ಲಿ 40 ಲಕ್ಷ ರೂ. ಮೊತ್ತದ ದೇವರ ವಿಗ್ರಹ ನೀಡಲು ಮುಂದಾಗಿದ್ದರು. ಇಗ್ಗುತ್ತಪ್ಪ ದೇವಾಲಯದಲ್ಲಿ ಬೇರೆ ದೇವರ ವಿಗ್ರಹ ಇಡಲು ವ್ಯವಸ್ಥಾಪನಾ ಸಮಿತಿ ಹಾಗೂ ಭಕ್ತ ಜನಸಂಘದ ಪ್ರಮುಖರು ಸಮ್ಮತಿ ಸೂಚಿಸಲಿಲ್ಲ.
ದೇವರ ವಿಗ್ರಹ ಬದಲು ದೇಗುಲ ಅಭಿವೃದ್ಧಿಗೆ 40 ಲಕ್ಷ ರೂ. ವಿನಿಯೋಗಿಸುವಂತೆ ಮಾಡಿಕೊಂಡ ಮನವಿಗೆ ಸಂಸದರು ಸಕಾರಾತ್ಮಕವಾಗಿ ಸ್ಪಂದಿಸಿದರು. ವೈಯಕ್ತಿಕವಾಗಿ 40 ಸಾವಿರ ರೂ. ನೀಡಲು ಸಮ್ಮತಿ ಸೂಚಿಸಿ, ಮೊದಲ ಕಂತಿನಲ್ಲಿ 25 ಲಕ್ಷ ರೂ. ಭಕ್ತ ಜನಸಂಘದ ಖಾತೆಗೆ ಜಮಾ ಮಾಡಿದರು. ಈ ಹಣ ಬಳಸಿಕೊಂಡು ದೇವಾಲಯ ಮುಂಭಾಗದಲ್ಲಿ ಪೌಳಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ನಿವೃತ್ತ ಇಂಜಿನಿಯರ್ ವಿಶ್ವನಾಥ್ ಉಸ್ತುವಾರಿಯಲ್ಲಿ ಕಾಮಗಾರಿ ಕೈಗೆತ್ತಿಕೊಂಡಿರುವುದಕ್ಕೆ ವ್ಯವಸ್ಥಾಪನಾ ಸಮಿತಿ ಆಕ್ಷೇಪ ವ್ಯಕ್ತಪಡಿಸಿತು. ವ್ಯವಸ್ಥಾಪನಾ ಸಮಿತಿ, ಭಕ್ತ ಜನಸಂಘದಲ್ಲಿ ಚರ್ಚಸದೆ ಏಕಪಕ್ಷೀಯವಾಗಿ ಕಾಮಗಾರಿ ಕೈಗೆತ್ತಿಗೊಳ್ಳುವುದು ಸರಿಯಲ್ಲ ಎಂಬ ಅಸಮಾಧಾನ ವ್ಯಕ್ತವಾಗಿತ್ತು. ತದನಂತರದ ಬೆಳವಣಿಗೆಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ ಅವರೊಂದಿಗೆ ಸಂಸದ ಕುಪ್ಪೇಂದ್ರ ರೆಡ್ಡಿ ಮಾತುಕತೆ ನಡೆಸಿ ವಿವಾದ ಇತ್ಯರ್ಥಪಡಿಸಿದ್ದಾರೆ. ಇದೀಗ ಕಾಮಗಾರಿ ಮುಂದುವರಿದಿದೆ.
ಅಭಿವೃದ್ಧಿ ಪರ್ವ
ದೇವಾಲಯ ವ್ಯವಸ್ಥಾಪನಾ ಸಮಿತಿಯಿಂದ 22.70 ಲಕ್ಷ ರೂ. ವೆಚ್ಚದಲ್ಲಿ ಮುಂಭಾಗದ ಒಂದು ಭಾಗದ ಪೌಳಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳ್ಳಲಾಗಿದೆ. ಭಕ್ತ ಜನಸಂಘದಿಂದ 30 ಲಕ್ಷ ರೂ. ವೆಚ್ಚದಲ್ಲಿ ದೇಗುಲ ಹಿಂಭಾಗದಲ್ಲಿರುವ ಪೌಳಿ ಅಭಿವೃದ್ಧಿ ಪಡಿಸಲಾಗಿದೆ. ತಲಾ 8 ಲಕ್ಷ ರೂ. ವೆಚ್ಚದಲ್ಲಿ ವ್ಯವಸ್ಥಾಪನಾ ಸಮಿತಿ ಕಚೇರಿ ಹಾಗೂ ಭಕ್ತ ಜನಸಂಘ ಕಚೇರಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
ನಿಧಿಯಿಂದ 20 ಲಕ್ಷರಾಜ್ಯಸಭೆ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಇಗ್ಗುತ್ತಪ್ಪ ದೇವಾಲಯದ ಅಭಿವೃದ್ಧಿಗೆ ಕುಪ್ಪೇಂದ್ರ ರೆಡ್ಡಿ 20 ಲಕ್ಷ ರೂ. ಅನುದಾನ ಮಂಜೂರು ಮಾಡಿದ್ದಾರೆ. ಈ ಮೊತ್ತದ ಕಾಮಗಾರಿ ಕೈಗೆತ್ತಿಗೊಂಡ ಬಳಿಕ ಹೆಚ್ಚುವರಿಯಾಗಿ 10 ರಿಂದ 15 ಲಕ್ಷ ರೂ. ಬಿಡುಗಡೆ ಮಾಡುವ ಭರವಸೆಯನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲವ ಚಿಣ್ಣಪ್ಪ ಅವರಿಗೆ ನೀಡಿದ್ದಾರೆ.
67 ಕೆಜಿ ಬೆಳ್ಳಿ ಕೊಡುಗೆ: ಕೊಡಗಿನ ಹಲವರೊಂದಿಗೆ ಆತ್ಮೀಯ ಒಡನಾಟ ಹೊಂದಿರುವ ಕುಪ್ಪೇಂದ್ರ ರೆಡ್ಡಿ ಹಲವು ವರ್ಷಗಳ ಹಿಂದೆ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭ ಪುತ್ರ ಸಂತಾನಕ್ಕಾಗಿ ದೇವರಿಗೆ ಕೋರಿಕೆ ಸಲ್ಲಿಸಿದ್ದರು. ತಮ್ಮ ಬೇಡಿಕೆ ಈಡೇರಿದ ಹಿನ್ನೆಲೆಯಲ್ಲಿ 2013 ರಲ್ಲಿ ಬೆಳ್ಳಿಯಿಂದ ತುಲಾಭಾರ ಸೇವೆ ಸಲ್ಲಿಸಿದ್ದರು. ತುಲಾಭಾರ ಮಾಡಿದ 64 ಕಿಲೋಗ್ರಾಂ ಬೆಳ್ಳಿಯಲ್ಲಿ ಇಗ್ಗುತ್ತಪ್ಪ ದೇವಾಲಯದ ಗರ್ಭಗುಡಿಗೆ ಬೆಳ್ಳಿ ಕವಚ ಹಾಕಲಾಗಿತ್ತು. ಬಾಕಿ ಇದ್ದ ಮೂರು ಕೆಜಿ ಬೆಳ್ಳಿಯನ್ನು ಉಡುಗೊರೆಯಾಗಿ ನೀಡಲಾಗುತ್ತದೆ.
ಕಾಂಕ್ರೀಟ್ ರಸ್ತೆ: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಂ.ಆರ್.ಸೀತಾರಾಮ್ ಮುತುವರ್ಜಿಯಿಂದ ಬಿಡುಗಡೆ ಮಾಡಿದ 2.50 ಕೋಟಿ ರೂಪಾಯಿ ವೆಚ್ಚದಲ್ಲಿ ಕಕ್ಕಬ್ಬೆ ಮುಖ್ಯರಸ್ತೆಯಿಂದ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯಕ್ಕೆ ಸಂಪರ್ಕ ಒದಗಿಸುವ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಮುಖ್ಯರಸ್ತೆಯಿಂದ 400 ಮೀಟರ್ ರಸ್ತೆ ತೀರಾ ದುಸ್ಥಿತಿಯಲ್ಲಿದ್ದು, ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಈ ರಸ್ತೆ ಅಭಿವೃದ್ಧಿಪಡಿಸುವಂತೆ ಇಗ್ಗುತ್ತಪ್ಪ ಭಕ್ತರು ಒತ್ತಾಯಿಸುತ್ತಿದ್ದಾರೆ.
ರಾಜ್ಯಸಭೆ ಸದಸ್ಯ ಕುಪ್ಪೇಂದ್ರ ರೆಡ್ಡಿ ವೈಯಕ್ತಿಕ ಹಾಗೂ ರಾಜ್ಯಸಭೆ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಲಕ್ಷಾಂತರ ರೂಪಾಯಿ ನೀಡಿದ್ದಾರೆ. ಈ ಹಣ ಬಳಸಿಕೊಂಡು ದೇಗುಲದ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇಗ್ಗುತ್ತಪ್ಪ ಭಕ್ತರಾಗಿ ದೇವಾಲಯದ ಅಭಿವೃದ್ಧಿ ಗೆ ಕುಪ್ಪೇಂದ್ರರೆಡ್ಡಿ ಆರ್ಥಿಕ ನೆರವು ಒದಗಿಸಿದ್ದಾರೆ.
ಬಾಚಮಂಡ ಲವ ಚಿಣ್ಣಪ್ಪ ಅಧ್ಯಕ್ಷರು, ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯ ವ್ಯವಸ್ಥಾಪನಾ ಸಮಿತಿ