ಶ್ರೀಗುರು ಪೀಠದಿಂದ ಸಂಘಟನೆ ಮತ್ತು ಸೌಹಾರ್ದಗಳ ಸಂವೃದ್ಧಿ

Development of organization and harmony from Sri Guru Peetha
ಗೋಕರ್ಣದ ಹಾಲಕ್ಕಿ ಹುಳಸೇಕೇರಿ ಸೀಮೆಯ ಪ್ರಧಾನ ಗೌಡರ ಮನೆಯಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಮಿರ್ಜಾನ ಶಾಖಾಮಠಾಧೀಶರಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅವರಿಗೆ ಬುಧವಾರ ಸಮಾಜದ ಸಮಸ್ತ ಶಿಷ್ಯರ ವತಿಯಿಂದ ಭಿಕ್ಷಾಸೇವೆ ಮತ್ತು ಪಾದಪೂಜೆ ಸಮರ್ಪಿಸಲಾಯಿತು. ಆನಂದು ಬೀರಪ್ಪ ಗೌಡ, ಕೃಷ್ಣ ಶುಕ್ರು ಗೌಡ, ಡಾ.ಶ್ರೀಧರ ಗೌಡ, ಗೋವಿಂದ ಗೌಡ ಮತ್ತಿತರರಿದ್ದರು.
Published on

ಗೋಕರ್ಣ : ಶ್ರೀಮಠ ಮತ್ತು ಶ್ರೀಗುರು ಪೀಠದ ಕೃಪಾಶ್ರಯ ಮತ್ತು ಆಶೀರ್ವಾದ ಬಲದಿಂದ ಸಮಾಜದ ಸಂಘಟನೆ ಮತ್ತು ಆಂತರಿಕ ಸೌಹಾರ್ದಗಳ ಸಂವರ್ಧನೆಯಾಗುತ್ತದೆ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಶಿಷ್ಯವರ್ಗಕ್ಕೆ ಸೇರಿದ ಉತ್ತರ ಕನ್ನಡದ ಹಾಲಕ್ಕಿ ಸಮಾಜ ಸೇರಿದಂತೆ ಸಮಸ್ತ ಒಕ್ಕಲಿಗ ಸಮಾಜದ ಅಭಿವೃದ್ಧಿ ಮತ್ತು ಔನ್ನತ್ಯಕ್ಕೆ ಶ್ರೀಮಠ ಮತ್ತು ಶ್ರೀಗುರುಪೀಠ ಪ್ರೇರಣಾಶಕ್ತಿಯಾಗಿ ಹರಸಲಿದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಮಿರ್ಜಾನ್ ಶಾಖಾಮಠಾಧೀಶರಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.

ಇಲ್ಲಿನ ಹಾಲಕ್ಕಿ ಹುಳಸೇಕೇರಿ ಸೀಮೆಯ ಸಮಸ್ತ ಶಿಷ್ಯಭಕ್ತರ ವತಿಯಿಂದ ಪ್ರಧಾನ ಗೌಡರಾದ ಆನಂದು ಬೀರಪ್ಪ ಗೌಡರ ಮನೆಯಲ್ಲಿ ಬುಧವಾರ ಭಿಕ್ಷಾಸೇವೆ ಮತ್ತು ಪಾದಪೂಜೆಯನ್ನು ಸ್ವೀಕರಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಹಾಲಕ್ಕಿ ಸಮಾಜ ಉತ್ತರ ಕನ್ನಡ ಜಿಲ್ಲೆಯ ಅತ್ಯಂತ ಮೂಲ ಬುಡಕಟ್ಟಿಗೆ ಸೇರಿದ ತನ್ನದೇ ಆದ ಸಂಸ್ಕಾರ ಮತ್ತು ಪರಂಪರೆಯನ್ನು ಸಂರಕ್ಷಿಸಿಕೊಂಡು ಬಂದಿರುವ ಅಪರೂಪದ ಜನಪದವಾಗಿದೆ. ಜಿಲ್ಲೆಯಲ್ಲಿ ಬಹು ಸಂಖ್ಯೆಯಲ್ಲಿರುವ ಹಾಲಕ್ಕಿಗಳು ಒಳಗೊಂಡಂತೆ ಸಮಸ್ತ ಒಕ್ಕಲಿಗ ಸಮಾಜ ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಮುನ್ನೆಲೆಗೆ ಬರುವ ನಿಟ್ಟಿನಲ್ಲಿ ಪ್ರಾಶಸ್ತ್ಯ ಮತ್ತು ಸೌಲಭ್ಯಗಳನ್ನು ಆಡಳಿತದ ಹೊಣೆ ಹೊತ್ತವರು ಒದಗಿಸಿಕೊಡುವಂತಾಗಲಿ ಎಂದರು.

ಸೀಮೆಯ ಪ್ರಧಾನ ಗೌಡರಾದ ಆನಂದು ಬೀರಪ್ಪ ಗೌಡ ಮತ್ತು ಸಹೋದರರಿಂದ ಪಾದಪೂಜೆ ಮತ್ತು ಮಹಾಮಂಗಳಾರತಿ ಸಮರ್ಪಿತವಾಯಿತು. ಸೀಮೆಯ ಬುದವಂತ ಗೌಡರಾದ ಕೃಷ್ಣ ಶುಕ್ರು ಗೌಡ, ಸಾಹಿತಿ ಡಾ.ಶ್ರೀಧರ ಗೌಡ, ಉದ್ಯಮಿ ಗೋವಿಂದ ನಾಗಪ್ಪ ಗೌಡ, ಸಾಮಾಜಿಕ ಕಾರ್ಯಕರ್ತ ನೀಲಪ್ಪ ಗೌಡ, ಹುಲಿಯಪ್ಪ ಅನಂತ ಗೌಡ, ಹುಲಿಯಾ ವೆಂಕ್ಟಾ ಗೌಡ ಮತ್ತಿರರಿದ್ದರು.

ನಂತರ ಶ್ರೀಗಳು ಇಲ್ಲಿನ ಅಶೋಕೆಯಲ್ಲಿನ ಅರಸು ಗೌಡರಾದ ಮಹಾಬಲೇಶ್ವರ ಗೌಡ ಅವರ ಮನೆಯಲ್ಲಿ ಪಾದಪೂಜೆ ಸ್ವೀಕರಿಸಿ ಆಶೀರ್ವಚನವನ್ನಿತ್ತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net