

ರಬಕವಿ/ಬನಹಟ್ಟಿ: ರಾಜ್ಯದ ಗ್ರಾಮೀಣ ಭಾಗದಲ್ಲಿ ಶಿಕ್ಷಣದ ಕೊರತೆ ಇದ್ದು, ಅದರೊಂದಿಗೆ ರಾಜ್ಯದ ಸಣ್ಣ ಸಣ್ಣ ಮಠಗಳಲ್ಲಿರುವ ಸಾಧು ಸಂತರಿಗೆ ಸರಿಯಾಗಿ ಮಠಗಳಿಲ್ಲದೆ, ಎಲ್ಲೋ ಗುಡಿಸಲುಗಳಲ್ಲಿ ವಾಸವಾಗಿದ್ದಾರೆ. ಅವರಿಗೆಲ್ಲ ಅನುಕೂಲವಾಗುವ ನಿಟ್ಟಿನಲ್ಲಿ ನಾವು ಹೋರಾಟ ಮಾಡುತ್ತಿದ್ದೇವೆ. ಅವುಗಳ ಉಳಿವಿಗಾಗಿ ಮತ್ತು ಸಂಪ್ರದಾಯ, ಸಂಸ್ಕೃತಿಗಾಗಿ ಬ್ರಿಗೇಡ್ ಪ್ರಾರಂಭಿಸಿದ್ದೇವೆ ಎಂದು ರಾಜ್ಯ ಕ್ರಾಂತಿವೀರ ಬ್ರಿಗೇಡ್ ಮುಖ್ಯಸ್ಥ ಕೆ. ಎಸ್. ಈಶ್ವರಪ್ಪ ತಿಳಿಸಿದರು.
ರಬಕವಿ ದಲಾಲ ಪಾರ್ಮಹೌಸನ್‌ಲ್ಲಿ ಭಾನುವಾರ ಮಧ್ಯಾಹ್ನ ನಡೆದ ಕಾರ್ಯಕರ್ತರ ಸಮಾರಂಭದಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
ಸಾಮಾನ್ಯ ಜನರು ಮಠಗಳಿಗೆ ಏನು ಕೊಡುತ್ತಾರೊ ಕೊಡಲಿ, ಆದರೆ, ಸರ್ಕಾರಗಳು ಮಠಮಾನ್ಯಗಳಿಗೆ ಕೊಡುವ ಅನುಧಾನವನ್ನು ನೀಡಿದರೆ ಮಾತ್ರ ದೇಶದ ಧರ್ಮ ಮತ್ತು ಹಿಂದುಳಿದ ಹಾಗೂ ದಲಿತ ವರ್ಗ ಉಳಿಯಲು ಸಾದ್ಯ ಎಂದರು.
ಫೆ. 4 ರಂದು ಬಸವನಬಾಗೇವಾಡಿಯಲ್ಲಿ ನಡೆಯುವ ಕ್ರಾಂತಿವೀರ ಬ್ರಿಗೇಡ್ ಬೃಹತ್ ಸಮಾವೇಶದಲ್ಲಿ 1008 ಸಾಧು ಸಂತರ ಪಾದಪೂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ದೇಶದಲ್ಲಿ ಎಲ್ಲ ರಾಜಕೀಯ ಪಕ್ಷಗಳಲ್ಲಿ ಪ್ರಾಮಾಣಿಕತೆ ಇಲ್ಲ, ಬರೀ ಸ್ವಾರ್ಥ ರಾಜಕೀಯ ಆದರೂ ಡಿ.ಕೆ. ಶಿವಕುಮಾರ ಅವರು ಮಠಮಾನ್ಯಗಳ ಉಳಿವಿಗೆ ದೂರದೃಷ್ಟಿಯಿಟ್ಟುಕೊಂಡು ಶ್ರೀಂಗೇರಿಯಲ್ಲಿ ಹೇಳಿದ ಹೇಳಿಕೆ ಪತ್ರಿಕೆಗಳಲ್ಲಿ ನೋಡಿದೆ. ಅದು ನಮಗೆ ಸಂತಸ ತಂದಿದೆ. ಅದೇ ದೃಷ್ಠಿಯಲ್ಲಿ ನಾವೂ ಮಠಮಾನ್ಯಗಳ ಸೇವೆಗೆ ಮುಂದಾಗಿದ್ದೇವೆ ಎಂದರು.
ಆದರೆ, ಈಗಿನ ರಾಜ್ಯ ಸರ್ಕಾರ ಕೇವಲ ಗ್ಯಾರಂಟಿ ಯೋಜನೆಗಳ ಮೇಲೆ ಅಧಿಕಾರಕ್ಕೆ ಬಂದಿದೆ. ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಬಿದ್ದು ಹೋಗಿದೆ. ಅಭಿವೃದ್ಧಿಗೆ ಬಳಸಬೇಕಾದ ಹಣ ಗ್ಯಾರಂಟಿಗಳಿಗೆ ಹೋಗಿದೆ. ರಸ್ತೆಗಳಲ್ಲಿನ ಗುಂಡಿಗಳು ಮುಚ್ಚಲು ಹಣವಿಲ್ಲ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಈ ಹಿಂದೆ ಮಾಡಿದ ಕಾಮಗಾರಿಗಳಿಗೆ ಕೊಡಲು ದುಡ್ಡೇ ಇಲ್ಲ, ಅದಕ್ಕಾಗಿ ಗುತ್ತಿಗೆದಾರರು ಪ್ರತಿಭಟನೆಗೆ ಮುಂದಾಗಿದ್ದಾರೆಂದರು.
ಎಲ್ಲ ರಾಜಕೀಯ ಪಕ್ಷಿಗಳು ಆಯಾ ಜಾತಿಗೆ ಸೀಮಿತವಾಗಿ ರಾಜಕಾರಣ ಮತ್ತು ಬರೀ ಬಣಗಳಾಗುತ್ತಿವೆ. ಡಾ. ಶಾಮಪ್ರಕಾಶ ಮುಖರ್ಜಿ ಅವರು ದೇಶ ಒಂದಾಗಿರಲಿ ಎಂಬ ಉದ್ದೇಶದಿಂದ ಬಲಿದಾನವನ್ನೇ ಮಾಡಿದರು. ಇಂದು ಬಿಜೆಪಿ ಬರೀ ಬಣ ರಾಜಕೀಯ ಮಾಡುತ್ತಿದೆ ಎಂದು ತಮ್ಮ ರಾಜಕೀಯ ಜೀವನದ ಕೆಲವು ಘಟನೆಗಳನ್ನು ನೆನೆದು ನನ್ನ ಕುತ್ತಿಗೆ ಕೊಯ್ದುರೂ ನಾನು ಬಿಜೆಪಿ ಬಿಡಲ್ಲ, ನನ್ನ ತಾಯಿ ಪಕ್ಷ ಬಿಜೆಪಿ ಎಂದರು.
ಕುತ್ತಿಗೆ ಕೊಯಿದರೂ ನಾನು ಕಾಂಗ್ರೆಸ್ ಸೇರಲ್ಲ, ಹಿಂದುವಾಗಿಯೇ ಇರುತ್ತೇನ. ಬಿಜೆಪಿಯಲ್ಲಿ ಹಂತಹಂತವಾಗಿ ಎಲ್ಲವೂ ಸರಿಯಾಗುತ್ತದೆ. ಯಾವುದೇ ಸಂಶಯವಿಲ್ಲ, ಗಾಂಧೀಜಿಯವರು ಇದ್ದಾಗಿನ ಕಾಂಗ್ರೆಸ್ ಈಗಿಲ್ಲ, ಅಲಟಜಿ ಇದ್ದಾಗಿನ ಬಿಜೆಪಿ ಈಗಿಲ್ಲ, ನಾನು ಚುನಾವಣೆ ನಿಂತಿದ್ದು ಬಿಜೆಪಿ ಶುದ್ಧೀಕರಣವಾಗಲಿ ಎಂಬ ಉದ್ದೇಶದಿಂದ ಎಂದರು.
ಒಟ್ಟಾರೆ ನಮ್ಮ ಉದ್ದೇಶ ದೇಶದಲ್ಲಿ ಸಂಸ್ಕೃತಿ ಸಂಪ್ರದಾಯ ಉಳಿಯಬೇಕು ಎಂಬ ಉದ್ದೇಶದಿಂದ ನಾವು ಕ್ರಾಂತಿವೀರ ಬ್ರಿಗೇಡ್ ಮೂಲಕ ಮುಂದಾಗಿದ್ದೇವೆ ಎಂದರು. ಬ್ರಿಗೇಡ್ ಬೇಡ ಎಂದು ಅನೇಕ ಮುಖಂಡರು ನಮ್ಮ ವಿರುದ್ಧ ಹರಿಹಾಯ್ದರು. ಈ ಕುರಿತು ದಿಲ್ಲಿಯಲ್ಲೂ ಸಭೆ ನಡೆಯಿತು. ಆದರೆ ನಾನು ಯಾವುದಕ್ಕೂ ಹೆದರುವುದಿಲ್ಲ ಎಂದು ಹೇಳಿದ್ದೇನೆ ಎಂದು ವಿವರಿಸಿದರು.
ಮಠಮಾನ್ಯಗಳು ಉಳಿಯಬೇಕು, ದಾರಿಯುದ್ದಕ್ಕೂ ಇರುವ ಅನೇಕ ದೇವಸ್ಥಾನಗಳಲ್ಲಿನ ಅರ್ಚಕರಿಗೆ ಸರಿಯಾದ ಮಾರ್ಗದಲ್ಲಿ ಮಂತ್ರಗಳ ಪಠಣೆಯಿಲ್ಲ. ಅವರಿಗೂ ತರಬೇತಿಗಳಾಗಬೇಕು, ಹೀಗೆ ಹತ್ತು ಹಲವು ಯೋಜನೆಗಳು ಬ್ರಿಗೇಡ್‌ದಲ್ಲಿವೆ ಎಂದರು.
ಬಸವರಾಜ ದಲಾಲ, ಪ್ರಕಾಶ ದಲಾಲ, ಕ್ರಾಂತಿವೀರ ಬ್ರಿಗೇಡ್ ರಾಜ್ಯ ಅಧ್ಯಕ್ಷ ಬಸವರಾಜ ಬಾಳಿಕಾಯಿ, ರಾಜ್ಯ ವಕ್ತಾರರಾದ ವೀರಣ್ಣ ಹಳೆಗೌಡರ, ಬಸವರಾಜ ನಿಡಗುಂದಿ ಇತರರಿದ್ದರು.