

ಬೆಂಗಳೂರು ಗ್ರಾಮಾಂತರ: ಬರಪೀಡಿತ ಜಿಲ್ಲೆಯೆಂಬ ಹಣೆಪಟ್ಟಿ ಧರಿಸಿರುವ ಜಿಲ್ಲೆಯ ಕೆರೆಗಳ ಅಭಿವೃದ್ಧಿ ಕಾಮಗಾರಿ ನನೆಗುದಿಗೆ ಬಿದ್ದಿದೆ. ನರೇಗಾ ಯೋಜನೆಯಡಿ ಕೆಲವೊಂದು ಕಲ್ಯಾಣಿ, ಸಣ್ಣ-ಪುಟ್ಟ ಕೆರೆ-ಕುಂಟೆಗಳಿಗೆ ಕಾಯಕಲ್ಪ ದೊರೆತಿದ್ದರೂ ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲಿ ದೊಡ್ಡಮಟ್ಟದ ಕೆರೆಗಳ ಕಾಯಕಲ್ಪಕ್ಕೆ ತಡೆಬಿದ್ದಿದೆ.
ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಕರೀಗೌಡ ಅವರು ಕೆರೆಗಳ ಅಭಿವೃದ್ಧಿಗೆ ದೊಡ್ಡಮಟ್ಟದ ಆಂದೋಲನ ಆರಂಭಿಸಿದ್ದರು. ಗ್ರಾಮದ ಮುಖಂಡರು ಹಾಗೂ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮ ರೂಪಿಸಲಾಗಿತ್ತು. ಖುದ್ದು ಕರೀಗೌಡರೇ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಕೆರೆಗಳ ಹೂಳೆತ್ತುವುದು, ಒತ್ತುವರಿ ತೆರವುಗೊಳಿಸಿ ಹದ್ದುಬಸ್ತು ನಿರ್ಮಿಸುವುದು ಸೇರಿ ಅಂತರ್ಜಲ ವೃದ್ಧಿಗೆ ಹಲವು ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಯೂ ಆಗಿದ್ದರು. ರೈತರು ಶ್ರಮದಾನದ ಮೂಲಕ ಕೆರೆಗಳ ಕಾಯಕಲ್ಪಕ್ಕೆ ಭಾಗಿಯಾಗಿದ್ದರು. ಇದಕ್ಕೆ ಈ ಬಾರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಅಭಿವೃದ್ಧಿಗೊಂಡ ಕೆರೆಗಳಲ್ಲಿ ಜಲರಾಶಿ ಕಾಣಿಸಿಕೊಂಡಿರುವುದೇ ಸಾಕ್ಷಿಯಾಗಿದೆ.
ಪ್ರಸ್ತುತ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಕೆರೆಗಳ ಕಾಯಕಲ್ಪಕ್ಕೆ ಮುಂದಾದರಾದರೂ ಕರೊನಾ ಕಾರಣದಿಂದ ಅಭಿವೃದ್ಧಿ ಕಾರ್ಯಕ್ರಮಕ್ಕೆ ತಡೆಯಾಯಿತು ಎನ್ನಲಾಗಿದೆ.
ಒತ್ತುವರಿ ಭೂತ: ಅನೇಕ ಕೆರೆಗಳು ಭೂಗಳ್ಳರಿಂದ ಒತ್ತುವರಿಯಾಗಿವೆ. ಬಡಾವಣೆ ನಿರ್ಮಾಣದ ವೇಳೆ ಕೆರೆ ಅಂಗಳಗಳು ಒತ್ತ್ತುವರಿದಾರರ ಪಾಲಾಗಿವೆ. ಕೆಲವೊಂದು ಸಣ್ಣ-ಪುಟ್ಟ ಕೆರೆಗಳು ಕಣ್ಮರೆಯಾಗಿವೆ. ಜಿಲ್ಲಾಡಳಿತ ಮೌನವಹಿಸಿದರೆ ಮತ್ತಷ್ಟು ಕೆರೆಗಳು ಭೂಗಳ್ಳರ ಪಾಲಾಗಲಿವೆ ಎಂಬುದು ಸಾರ್ವಜನಿಕರ ಆತಂಕವಾಗಿದೆ. ಅಕ್ರಮ ಲೇಔಟ್ ವಿರುದ್ಧ ಸಮರ ಸಾರಿರುವ ಜಿಲ್ಲಾಡಳಿತ ಕಾರ್ಯಾಚರಣೆ ಮೂಲಕ ಅಂಥ ಜಮೀನುಗಳನ್ನು ವಶಕ್ಕೆ ಪಡೆಯುವ ಕೆಲಸ ಮುಂದುವರಿಸಿದೆ. ಇದೇ ರೀತಿ ಒತ್ತುವರಿಯಾಗಿರುವ ಕೆರೆಅಂಗಳಗಳನ್ನು ಜಿಲ್ಲಾಡಳಿತದ ಸುಪರ್ದಿಗೆ ಪಡೆಯಬೇಕೆಂಬುದು ಜನರ ಅಶಯವಾಗಿದೆ.
15 ಸಾವಿರ ಕೆರೆ: ಜಿಲ್ಲೆಯಲ್ಲಿ ಸುಮಾರು 15 ಸಾವಿರ ಕೆರೆಗಳಿರುವ ಬಗ್ಗೆ ಜಿಲ್ಲಾಡಳಿತದ ದಾಖಲೆಯಲ್ಲಿ ಉಲ್ಲೇಖವಾಗಿದೆ. ಇದರಲ್ಲಿ ಸುಮಾರು 8 ಸಾವಿರ ಕೆರೆಗಳ ಅಂಗಳ ಒತ್ತುವರಿಯಾಗಿದೆೆ ಎಂಬುದು ಪ್ರಾಥಮಿಕ ಪರಿಶೀಲನೆಯಲ್ಲಿ ಕಂಡುಬಂದಿದೆ ಕೃಷಿ ಭೂಮಿ, ಕೈಗಾರಿಕೆ ಹಾಗೂ ಲೇಔಟ್ ನಿರ್ಮಾಣದ ಹೆಸರಲ್ಲಿ ಹಂತಹಂತವಾಗಿ ಕೆರೆ ಕಬಳಿಕೆಯಾಗುತ್ತಿರುವುದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.
ಗ್ರಾಮಾಂತರ ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲಿ ನೀಲಗಿರಿ ಮರಗಳ ತೆರವಿನ ಜತೆಗೆ ಕೆರೆಗಳಲ್ಲಿ ಹೂಳು ತೆಗೆದು ಹದ್ದುಬಸ್ತು ನಿರ್ಮಿಸಿ ಕೆರೆಗಳ ಅಭಿವೃದ್ಧಿಗೆ ದೊಡ್ಡ ಮಟ್ಟದಲ್ಲಿ ಆರಂಭಿಸಿದ ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಪ್ರಾಥಮಿಕ ಹಂತದಲ್ಲಿ ಜಿಲ್ಲೆಯಲ್ಲಿ 150 ಕೆರೆಗಳನ್ನು ಗುರುತಿಸಲಾಗಿತ್ತು. ಅದರಲ್ಲಿ 26ಕ್ಕೂ ಹೆಚ್ಚು ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕರೀಗೌಡ, ಕೃಷಿ ಮಾರುಕಟ್ಟಿ ನಿರ್ದೇಶಕ, ನಿರ್ಗಮಿತ ಜಿಲ್ಲಾಧಿಕಾರಿ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಕರೀಗೌಡ ಅವರ ಅಧಿಕಾರವಧಿಯಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಕೆರೆಗಳು ಅಭಿವೃದ್ದಿ ಕಂಡಿವೆ. ಕೆರೆಗಳ ಹೂಳೆತ್ತುವುದು, ಒತ್ತುವರಿ ಜಾಗ ತೆರವುಗೊಳಿಸಿ ಪೆನ್ಸಿಂಗ್ ಹಾಕುವ ಕಾರ್ಯ ಬಿರುಸಿನಿಂದ ಸಾಗಿತ್ತು. ಈಗ ಇಂಥ ಅಭಿಯಾನ ಯಾಕೋ ಸದ್ದು ಮಾಡುತ್ತಿಲ್ಲ. ವಾಸು ರೈತಸಂಘದ ಸದಸ್ಯ, ತುರವನಹಳ್ಳಿ