ಪ್ರವಾಸಿ ತಾಣವಾಗಿ ಕೆಂಪಸಾಗರ ಕೆರೆ ಅಭಿವೃದ್ಧಿ

FotoJet (2)
Published on

ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿಕೆ | ತೆಪ್ಪೋತ್ಸವಕ್ಕೆ ಚಾಲನೆ

ವಿಜಯವಾಣಿ ಸುದ್ದಿಜಾಲ ಮಾಗಡಿ

ಕೆಂಪಸಾಗರ ಕೆರೆಯನ್ನು ಸಮಗ್ರ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿ ಮಾಡುವುದಾಗಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.

ತಾಲೂಕಿನ ಕೆಂಪಸಾಗರ ಕೆರೆಯಲ್ಲಿ ಶುಕ್ರವಾರ ತೆಪ್ಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೆಂಪಸಾಗರ ಗೇಟ್‌ನಿಂದ ಕೆಂಪಸಾಗರ ಕೆರೆ ಏರಿ ಮೂಲಕ ಹಾಲಶೆಟ್ಟಹಳ್ಳಿವರೆಗೆ ರಸ್ತೆ ಅಭಿವೃದ್ಧಿ ಪಡಿಸಲಾಗುವುದು, ಈಶ್ವರ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಲು ಕ್ರಮವಹಿಸಲಾಗುವುದು ಎಂದು ಬಾಲಕೃಷ್ಣ ಹೇಳಿದರು.

ಸಿದ್ದರಾಮಯ್ಯ ಸಿಎಂ ಆದರೂ ಕೆರೆ ತುಂಬಿದೆ!

ಕೆಂಪೇಗೌಡರು ನಿರ್ಮಿಸಿರುವ ಕೆಂಪಸಾಗರ ಕೆರೆ ತುಂಬಿದರೆ ನಾಡು ಸಮೃದ್ಧಿಯಾಗಿರುತ್ತದೆ, ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರೆ ಕೆರೆ, ಕಟ್ಟೆ ತುಂಬುವುದಿಲ್ಲ ಎನ್ನುವ ನಾಲ್ನುಡಿ ಇತ್ತು. ಆದರೀಗ ಸಿದ್ದರಾಮಯ್ಯ ಮುಖ್ಯಮಂತ್ರಿ, ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿಯಾಗಿದ್ದು, ಕೆರೆಗಳು ತುಂಬಿವೆ. ನಾಡಿನ ಜನ ಸಮೃದ್ಧಿ ಜೀವನ ನಡೆಸುತ್ತಿದ್ದಾರೆ ಎಂದು ಬಾಲಕೃಷ್ಣ ಹೇಳಿದರು.

ಮಾಜಿ ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಸುತ್ತಮುತ್ತಲ ಗ್ರಾಮಸ್ಥರು ಒಗ್ಗೂಡಿ ತೆಪ್ಪೋತ್ಸವ ಆಚರಿಸುವ ಮೂಲಕ ನಮ್ಮ ಸಂಸ್ಕೃತಿಗೆ ಮೆರಗು ನೀಡಿದ್ದಾರೆ. ಈ ದೇಶದ ಸಂಸ್ಕೃತಿ, ಸಂಸ್ಕಾರ, ಆಚಾರ ವಿಚಾರಗಳನ್ನು ಪಾಲಿಸುತ್ತಿರುವುದರಿಂದ ಉತ್ತಮ ಮಳೆ, ಬೆಳೆಯಾಗುತ್ತಿದೆ. ಇದರಿಂದ ನಮ್ಮ ನಂಬಿಕೆ ಉಳಿದಿದೆ, ಆಧುನೀಕರಣಕ್ಕೆ ತಕ್ಕಂತೆ ಕೆಂಪಸಾಗರ ಕೆರೆಯನ್ನು ಅಭಿವೃದ್ಧಿಪಡಿಸಬೇಕು ಎಂಬುದು ಸ್ಥಳಿಯರ ಮನವಿ. ಅದರಂತೆ ಶಾಸಕ ಎಚ್.ಸಿ.ಬಾಲಕೃಷ್ಣ ನೇತೃತ್ವದಲ್ಲಿ ಒಗ್ಗಟ್ಟಾಗಿ ಕೆಲಸಮಾಡಲಾಗುವುದು ಎಂದರು.

ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಗ್ರಾಮಗಳಲ್ಲಿ ದೇವಾಲಯ, ಕೆರೆ, ಕಟ್ಟೆ ನಿರ್ಮಿಸಿ ತೆಪ್ಪೋತ್ಸವ ಆಚರಿಸುತ್ತಿದ್ದರು. ಅದರಂತೆ ಗ್ರಾಮಸ್ಥರು ತೆಪ್ಪೋತ್ಸವ ಆಚರಿಸುತ್ತ ಪೂರ್ವಿಕರ ಆಚರಣೆಗೆ ಮಹತ್ವ ನೀಡಿರುವುದು ಉತ್ತಮ ಬೆಳವಣಿಗೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರೆ ಮಳೆ, ಬೆಳೆ ಆಗಲ್ಲ ಎನ್ನುತ್ತಿದ್ದರು, ಆದರೀಗ ಕೆಂಪಸಾಗರ ಕೆರೆ ಅಲ್ಲದೆ ಕನ್ನಂಬಾಡಿ ಜಲಾಶಯವೂ ತುಂಬಿದೆ. ಇದು ವಿರೋಧಿಗಳಿಗೆ ಉತ್ತರ ಎಂದರು.

ತಾಪಂ ಮಾಜಿ ಸದಸ್ಯೆ ಸುಮಾ ರಮೇಶ್ ಮಾತನಾಡಿ, ನಾಡಪ್ರಭು ಕೆಂಪೇಗೌಡರು ತನ್ನ ತಾಯಿ ಕೆಂಪಮ್ಮ ಅವರ ಹೆಸರಿನಲ್ಲಿ ಕೆಂಪಸಾಗರ ಕೆರೆಯನ್ನು ನಿರ್ಮಿಸಿ, ಈ ಭಾಗದ ಹತ್ತಾರು ಗ್ರಾಮಗಳ ರೈತರಿಗೆ ಅನುಕೂಲವಾಗುವಂತೆ ಮಾಡಿದರು ಎಂದರು.

ತೆಪ್ಪೋತ್ಸವವನ್ನು ಸಾವಿರಾರು ಮಂದಿ ಕಣ್ಣುತುಂಬಿಕೊಂಡು ಭಕ್ತಿ ಸರ್ಮಪಿಸಿದರು. ಮೂರು ಗ್ರಾಮದ ಜನರು ಸೇರಿ ಬಸವಣ್ಣ, ಮಾರಮ್ಮ, ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಯನ್ನು ಕೆರೆಯ ಕೋಡಿ ಬಳಿ ಪ್ರತಿಷ್ಠಾಪಿಸಿದರು. ಭಕ್ತರಿಗೆ ನಿರಂತರ ಅನ್ನಸಂತರ್ಪಣೆ. ಕೊಸಂಬರಿ, ಮಜ್ಜಿಗೆ, ಪಾನಕ ವಿತರಿಸಲಾಯಿತು.

ಬಮುಲ್ ನಿರ್ದೇಶಕ ನರಸಿಂಹಮೂರ್ತಿ, ಜಿಪಂ ಮಾಜಿ ಸದಸ್ಯರಾದ ಎಂ.ಕೆ.ಧನಂಜಯ, ನಾಗರತ್ನ, ಜೆ.ಪಿ.ಚಂದ್ರೇಗೌಡ, ಗ್ರಾಪಂ ಅಧ್ಯಕ್ಷ ಶಿವಲಿಂಗಯ್ಯ, ಉಪಾಧ್ಯಕ್ಷ ಗಂಗಮ್ಮ ರಾಜಶೇಖರಯ್ಯ, ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಮಹದೇವಯ್ಯ, ರೂಪೇಶ್, ಬಸಂತಿ, ಉಮೇಶ್, ಗಿರಿಯಪ್ಪ, ರಾಜಶೇಖರ್, ಸಂಪತ್ತು, ರಾಮಣ್ಣ, ನಂದೀಶ್, ಬೆಂಕಿ ಮಹದೇವ್, ಶ್ರೀಪತಿಹಳ್ಳಿ ರಾಜಣ್ಣ ಇದ್ದರು.

ಶಾಶ್ವತ ನೀರಾವರಿಗೆ ಆದ್ಯತೆ

ತಾಲೂಕಿನ ಎಲ್ಲ ಕೆರೆಗಳನ್ನು ಶಾಶ್ವತವಾಗಿ ತುಂಬಿಸುವ ಉದ್ದೇಶ ನಮ್ಮದಾಗಿದೆ. ಈ ನಿಟ್ಟಿನಲ್ಲಿ ಶ್ರೀರಂಗ ಏತನೀರಾವರಿ ಯೋಜನೆ ಕೆಲಸ ವೇಗವಾಗಿ ನಡೆಯುತ್ತಿದ್ದು, ಕೆಲ ಶಾಸಕರು ಇದಕ್ಕೆ ಅಡೆತಡೆ ಒಡ್ಡಿದ್ದಾರೆ. ಶೀಘ್ರವೇ ಅದನ್ನು ಬಗೆಹರಿಸಲಾಗುವುದು. ಇದರೊಂದಿಗೆ ಎತ್ತಿನಹೊಳೆಯಿಂದ ಈ ಭಾಗಕ್ಕೆ ನೀರು ತರಲಾಗುವುದು, ಸತ್ಯಗಾಲದಿಂದ ಮಂಚನಬೆಲೆ-ವೈಜಿಗುಡ್ಡ ಜಲಾಶಯಕ್ಕೆ ನೀರು ಹರಿಸಲಾಗುವುದು. ಅದರಂತೆ ವೈಜಿಗುಡ್ಡ ಜಲಾಶಯದಿಂದಲೂ ಈ ಭಾಗದ ಕೆರೆ ತುಂಬಿಸಲು ಸರ್ಕಾರ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕ್ರಮ ಕೈಗೊಂಡಿದ್ದಾರೆ. ರೈತರು ಬದುಕಲು ನೀರಿನ ಅವಶ್ಯಕತೆ ಇದೆ. ಅದನ್ನು ಗಮನದಲ್ಲಿಟ್ಟು ರಾಮನಗರ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಲು ನಾವೆಲ್ಲರೂ ಕೆಲಸ ಮಾಡುತ್ತೇವೆ ಎಂದರು. ಈ ವೇಳೆ ಕೆಎಂಎಫ್ ಅಧ್ಯಕ್ಷ ಆಕಾಂಕ್ಷಿ ವಿಚಾರವಾಗಿ ಮಾತನಾಡಿದ ಡಿಕೆಸು, ಸದ್ಯಕೆ ಜನ ನನಗೆ ವಿಶ್ರಾಂತಿ ನೀಡಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net