ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕರ್ನಾಟಕ ಅಭಿವೃದ್ಧಿ

30
Published on

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಕರ್ನಾಟಕ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ ಎಂದು ಭುವನ್‌ರಾಜ್ ಫೌಂಡೇಷನ್ ಅಧ್ಯಕ್ಷರೂ ಆದ ಹಿರಿಯ ಕಾಂಗ್ರೆಸ್ ಮುಖಂಡ ಚೇತನ್ ರಾಜ್ ಮೆಚ್ಚುಗೆ ನುಡಿಗಳನ್ನಾಡಿದರು.

ನಗರದ ಕರಿಮಾರಮ್ಮ ದೇವಸ್ಥಾನದ ಆವರಣದಲ್ಲಿ ಬುಧವಾರ ನಿರ್ಗತಿಕರಿಗೆ ಉಚಿತವಾಗಿ ಕಂಬಳಿ ವಿತರಿಸಿ ಅವರು ಮಾತನಾಡಿದರು.

ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿದ್ದಾರೆ. ಆ ಮೂಲಕ ರಾಜ್ಯದ ಜನರನ್ನು ಉದ್ಧರಿಸಿದೆ. ಉಚಿತ ಪ್ರಯಾಣದಿಂದ ಕೋಟ್ಯಂತರ ಮಹಿಳೆಯರು ಇಂದು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚಾರ ಮಾಡುತ್ತಿದ್ದಾರೆ. ಗೃಹ ಲಕ್ಷ್ಮಿಯೋಜನೆಯಿಂದ ಮಹಿಳೆಯರ ಕೈಯಲ್ಲಿ ಹಣದ ವಹಿವಾಟು ನಡೆಯುವಂತಾಗಿದೆ. ಗೃಹ ಜ್ಯೋತಿಯಿಂದ ಮನೆಯಲ್ಲಿ ಸದಾ ಜ್ಯೋತಿ ಉರಿಯುತ್ತಿದೆ. ಯುವ ನಿಧಿಯಿಂದ ನಿರುದ್ಯೋಗಿ ಪದವಿಧರರಿಗೆ ನೆರವಾಗಿದೆ ಎಂದು ಕೊಂಡಾಡಿದರು.

ರಾಜ್ಯ ಸರ್ಕಾರದ ಮಾದರಿಯನ್ನು ಬಿಜೆಪಿ ರಾಜ್ಯಗಳೇ ಅನುಸರಿಸುತ್ತಿವೆ. ಅನ್ನ ಭಾಗ್ಯ ಯೋಜನೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿದ ಏಕೈಕ ರಾಜ್ಯ ನಮ್ಮದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಯಾವುದೇ ಅಡೆ-ತಡೆ ಬಂದರೂ ರಾಜ್ಯದ ಜನರ ಹಿತಕ್ಕಾಗಿ ಅನ್ನಭಾಗ್ಯ ಯೋಜನೆಯಿಂದ ಹಿಂದೆ ಸರಿದಿಲ್ಲ. ಇಷ್ಟೆಲ್ಲ ಅಭಿವೃದ್ಧಿಯ ಮೂಲಕ ರಾಜ್ಯವನ್ನು ಮಾದರಿಯನ್ನಾಗಿ ಮಾಡಿದ ಸಿಎಂ ಹಾಗೂ ಡಿಸಿಎಂ ಮೇಲೆ ಬಿಜೆಪಿ ನಾಯಕರು ಸುಮ್ಮನೆ ಆರೋಪ ಮಾಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಅದನ್ನು ಬಿಟ್ಟು ಅಭಿವೃದ್ಧಿ ರಾಜಕಾರಣ ಮಾಡಿ ಎಂದು ಸಲಹೆ ನೀಡಿದರು.

ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅವರು ಕೆ.ಆರ್.ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದಾರೆ. ತಮ್ಮ ಅಧಿಕಾರದ ಅವಧಿಯಲ್ಲಿ ಹಲವಾರು ಯೋಜನೆಗಳನ್ನು ಕ್ಷೇತ್ರಕ್ಕಾಗಿ ತಂದಿದ್ದಾರೆ. ಪರಿಣಾಮ ಇಂದು ಕ್ಷೇತ್ರ ಯಾವುದೇ ಕೊರತೆ ಇಲ್ಲದೆ ಸಮೃದ್ಧವಾಗಿದೆ. ಇವರ ಅಭಿವೃದ್ಧಿ ಪರ ರಾಜಕೀಯ ಇಂದಿನ ಯುವ ರಾಜಕಾರಣಿಗಳಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎಂ.ಕೆ.ಸೋಮಶೇಖರ ಅವರ ಮಾರ್ಗದರ್ಶನದಲ್ಲಿ ಭುವನ್ ರಾಜ್ ಫೌಂಡೇಷನ್ ನಡೆಯುತ್ತಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಮಾಜ ಸೇವೆ ಮಾಡಲಾಗುತ್ತಿದೆ. ಇದರಿಂದ ಹಲವಾರು ಫಲಾನುಭವಿಗಳಿಗೆ ಅನುಕೂಲವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net