ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕನ್ನಡದ ಬೆಳವಣಿಗೆ

28sirsi2
Published on

ಶಿರಸಿ : ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಚಟುವಟಿಕೆ ಕನ್ನಡದ ಬೆಳವಣಿಗೆಗೆ ಸಹಕಾರಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಭಾನುವಾರ ರಾತ್ರಿ ನಗರದ ಟಿಎಂಎಸ್ ಸಭಾಂಗಣದಲ್ಲಿ ಸಿದ್ದಾಪುರದ ರಂಗ ಸೌಗಂಧ ಕಲಾ ತಂಡದವರು ಪ್ರದರ್ಶಿಸಿದ ಎನ್.ಎಸ್. ರಾವ್ ಮೂಲ ರಚನೆಯ, ಗಣಪತಿ ಹೆಗಡೆ ಹುಲಿಮನೆ ನಿರ್ದೇಶನದ 36 ಅಲ್ಲ 63 ನಾಟಕವನ್ನು ಉದ್ಘಾಟಿಸಿ ಮಾತನಾಡಿದರು. ಕಲೆ, ಸಾಹಿತ್ಯ, ಸಂಸ್ಕೃತಿಗಳನ್ನು ಮರೆಯದೆ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು. ನಮ್ಮ ನಾಟಕ, ಯಕ್ಷಗಾನಗಳು ಕನ್ನಡದ ಬೆಳವಣಿಗೆಗೆ ಸಹಕಾರಿ ಆಗಲಿವೆ. ಸರ್ಕಾರ, ಸಂಸ್ಥೆಗಳು, ಪ್ರೇಕ್ಷಕರು ಒಟ್ಟಾಗಿ ಅಂಥ ಚಟುವಟಿಕೆಗೆ ಬೆಂಬಲಿಸಬೇಕು ಎಂದರು. ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಮಾತನಾಡಿ, ಟಿವಿ ಮಾಧ್ಯಮಗಳಿಂದ ರಂಗಭೂಮಿಯ ಚಟುವಟಿಕೆಗೆ ಪ್ರೇಕ್ಷಕರ ಕೊರತೆ ಆಗುತ್ತಿತ್ತು. ಆದರೆ, ಈಗ ಹಾಗಿಲ್ಲ. ಕಾಲ ಬದಲಾಗಿದೆ. ಹೊಸ ತಲೆಮಾರಿನ ಪ್ರೇಕ್ಷಕರು, ಕಲಾವಿದರ ಸೃಷ್ಟಿ ಕೂಡ ಆಗಬೇಕು ಎಂದು ಹೇಳಿದರು. ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ಮಾತನಾಡಿ ಕನ್ನಡಾಂಬೆಯ ತ್ರಿಕಾಲ ಪೂಜೆ ಭುವನಗಿರಿಯಲ್ಲಿ ಆಗುತ್ತಿದೆ. ಅಲ್ಲಿ ಸರ್ಕಾರದಿಂದ ಕನ್ನಡದ ಅಸ್ಮಿತೆಗಾಗಿ ರಾಜ್ಯ ಅಥವಾ ಜಿಲ್ಲಾ ಮಟ್ಟದ ಕನ್ನಡದ ಉತ್ಸವ ಆಗಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net