ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕನ್ನಡದ ಬೆಳವಣಿಗೆ

Drama Programme
Published on

ಶಿರಸಿ: ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಚಟುವಟಿಕೆ ಕನ್ನಡದ ಬೆಳವಣಿಗೆಗೆ ಸಹಕಾರಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ಭಾನುವಾರ ರಾತ್ರಿ ನಗರದ ಟಿಎಂಎಸ್ ಸಭಾಂಗಣದಲ್ಲಿ ಸಿದ್ದಾಪುರದ ರಂಗ ಸೌಗಂಧ ಕಲಾ ತಂಡದವರು ಪ್ರದರ್ಶಿಸಿದ ಎನ್.ಎಸ್. ರಾವ್ ಮೂಲ ರಚನೆಯ, ಗಣಪತಿ ಹೆಗಡೆ ಹುಲಿಮನೆ ನಿರ್ದೇಶನದ 36 ಅಲ್ಲ 63 ನಾಟಕವನ್ನು ಉದ್ಘಾಟಿಸಿ ಮಾತನಾಡಿದರು.

ಕಲೆ, ಸಾಹಿತ್ಯ, ಸಂಸ್ಕೃತಿಗಳನ್ನು ಮರೆಯದೆ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು. ನಮ್ಮ ನಾಟಕ, ಯಕ್ಷಗಾನಗಳು ಕನ್ನಡದ ಬೆಳವಣಿಗೆಗೆ ಸಹಕಾರಿ ಆಗಲಿವೆ. ಸರ್ಕಾರ, ಸಂಸ್ಥೆಗಳು, ಪ್ರೇಕ್ಷಕರು ಒಟ್ಟಾಗಿ ಅಂಥ ಚಟುವಟಿಕೆಗೆ ಬೆಂಬಲಿಸಬೇಕು ಎಂದರು.

ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಮಾತನಾಡಿ, ಟಿವಿ ಮಾಧ್ಯಮಗಳಿಂದ ರಂಗಭೂಮಿಯ ಚಟುವಟಿಕೆಗೆ ಪ್ರೇಕ್ಷಕರ ಕೊರತೆ ಆಗುತ್ತಿತ್ತು. ಆದರೆ, ಈಗ ಹಾಗಿಲ್ಲ. ಕಾಲ ಬದಲಾಗಿದೆ. ಹೊಸ ತಲೆಮಾರಿನ ಪ್ರೇಕ್ಷಕರು, ಕಲಾವಿದರ ಸೃಷ್ಟಿ ಕೂಡ ಆಗಬೇಕು ಎಂದು ಹೇಳಿದರು.

ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ಮಾತನಾಡಿ ಕನ್ನಡಾಂಬೆಯ ತ್ರಿಕಾಲ ಪೂಜೆ ಭುವನಗಿರಿಯಲ್ಲಿ ಆಗುತ್ತಿದೆ. ಅಲ್ಲಿ ಸರ್ಕಾರದಿಂದ ಕನ್ನಡದ ಅಸ್ಮಿತೆಗಾಗಿ ರಾಜ್ಯ ಅಥವಾ ಜಿಲ್ಲಾ ಮಟ್ಟದ ಕನ್ನಡದ ಉತ್ಸವ ಆಗಬೇಕು ಎಂದರು.

ನಿರ್ದೇಶಕ ಗಣಪತಿ ಹೆಗಡೆ ಹುಲಿಮನೆ ಸ್ವಾಗತಿಸಿದರು. ಗಣಪತಿ ಹೆಗಡೆ ಗುಂಜಗೋಡ ನಿರ್ವಹಿಸಿದರು. ಶ್ರೀಪಾದ ಹೆಗಡೆ ವಂದಿಸಿದರು.

ಬಳಿಕ ಪ್ರದರ್ಶನ ಕಂಡ ಒಂದು ಮುಕ್ಕಾಲು ಗಂಟೆಯ 36 ಅಲ್ಲ 63 ನಾಟಕ ಪ್ರೇಕ್ಷಕರನ್ನು ನಗೆ ಗಡಲಲ್ಲಿ ತೇಲಿಸುವ ಜತೆಗೆ ಒಂದಾಗಿ ಹೋಗುವ ಸಂಗತಿಯನ್ನೂ ಬಿಂಬಿಸಿತು. ಇಡೀ ನಾಟಕ ಹವಿ ಗನ್ನಡದಲ್ಲಿ ಪ್ರದರ್ಶನ ಕಂಡಿದ್ದು, ಐವರು ಕಲಾವಿದರು ರಂಗದಲ್ಲಿ ಕಾಣಿಸಿಕೊಂಡು ಮೆಚ್ಚುಗೆಗೆ ಪಾತ್ರರಾದರು.

ರಂಗದಲ್ಲಿ ಗಣಪತಿ ಹೆಗಡೆ ಗುಂಜಗೋಡ, ನಾಗಪತಿ ಭಟ್ಟ ವಡ್ಡಿನಗದ್ದೆ, ಅಜಿತ್ ಭಟ್ಟ ಹೆಗ್ಗಾರಳ್ಳಿ, ಶ್ರೀಪಾದ ಹೆಗಡೆ ಕೋಡನಮನೆ, ಪ್ರವೀಣಾ ಹೆಗಡೆ ಗುಂಜಗೋಡ ಕಾಣಿಸಿಕೊಂಡರೆ, ಶ್ರೀಪಾದ ಹೆಗಡೆ ಕೋಡನಮನೆ ರಂಗ ವಿನ್ಯಾಸ, ರಾಜೇಂದ್ರ ಕೊಳಗಿ ಸಂಗೀತ ನಿರ್ದೇಶನ, ನಾಗರಾಜ್ ಜೋಗಿ ಸಂಗೀತ ನಿರ್ವಹಣೆ ಮಾಡಿದರು. ರಂಗ ಪ್ರದರ್ಶನದ ಬಳಿಕ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ, ಪತ್ರಕರ್ತ ಶಿವಾನಂದ ಕಳವೆ, ಭಾಗಿರಥಿ ಕರಿ ಇತರರು ಅನಿಸಿಕೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net