ಕನ್ನಡದ ಅಭಿವೃದ್ಧಿ ಭಾಷಣಕ್ಕೆ ಸೀಮಿತವಾಗದಿರಲಿ; ಎಚ್. ವಿಶ್ವನಾಥ

H Vishwanath
Published on

ವಿಜಯಪುರ: ಕನ್ನಡ ರಾಜ್ಯೋತ್ಸವವನ್ನು ಸರ್ಕಾರ 50 ವರ್ಷದ ಸುವರ್ಣ ಮಹೋತ್ಸವ ಎಂದು ಆಚರಿಸುತ್ತಿರುವುದು ಸಂತಸದ ಸಂಗತಿ. ಆದರೆ, ಕನ್ನಡ ವಿಚಾರವಾಗಿ ಕೇವಲ ಭಾಷಣ ಮಾಡಿಕೊಂಡು ಹೊರಟಿದ್ದಾರೆ. ಅದನ್ನು ಬಿಟ್ಟು ಕನ್ನಡದ ಅಭ್ಯುದಯಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ ಹೇಳಿದರು.

ರಾಜ್ಯ ಸರ್ಕಾರ ಮೊದಲು ಕನ್ನಡದ ಉಳಿವಿಗಾಗಿ ಪ್ರಯತ್ನ ಮಾಡಬೇಕಿದೆ. ಆಡಳಿತ ಭಾಷೆಯನ್ನಾಗಿ ಜಾರಿ ಮಾಡಿ ಕನ್ನಡವನ್ನು ಉಳಿಸಿಕೊಳ್ಳಬೇಕು. ಸಿಎಂ ಸಿದ್ದರಾಮಯ್ಯ ಕನ್ನಡದ ಭಾಷೆ ಹಾಗೂ ಶಿಕ್ಷಣದ ಬಗ್ಗೆ ಗಟ್ಟಿ ನಿಲುವು ತೆಗೆದುಕೊಳ್ಳಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಕರ್ನಾಟಕ ಸರ್ಕಾರ ಕನ್ನಡ ಆಡಳಿತ ಭಾಷೆ ಮಾಡುತ್ತೇವೆ ಎಂದು ವಿಧಾನಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಮಾಡಿ ರಾಷ್ಟ್ರಾಧ್ಯಕ್ಷರಿಗೆ ಕಳುಹಿಸಿತ್ತು. ಆದರೆ, ಅವರು ಸ್ಪಷ್ಟನೆ ಕೇಳಿದ್ದರು. ಮುಂದೆ ಈ ವಿಚಾರವಾಗಿ ಏನಾಯಿತು ಎಂಬುದು ಇನ್ನೂ ತಿಳಿಸಿಲ್ಲ. ಕನ್ನಡದ ಬಗೆಗಿನ ಸಾರ್ಥಕತೆ, ಅದರ ಬಗ್ಗೆ ಧೈರ್ಯವಾಗಿ ಹೇಳುವುದು ಆಗಲಿಲ್ಲ. ಸರ್ಕಾರಿ ಶಾಲೆ ಮತ್ತು ಅನುದಾನಿತ ಶಾಲೆಯಲ್ಲಿ ಕನ್ನಡ ಕಡ್ಡಾಯ ಮಾಡಬೇಕು. ಒಂದರಿಂದ ಐದನೇ ತರಗತಿಯವರೆಗೆ ಕನ್ನಡ ಜಾರಿ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡುವುದಾಗಿ ತಿಳಿಸಿದರು.

ಆದಿಲ್ ಶಾಹಿ ಆಡಳಿತ ಮಾಡಿದ ವಿಜಯಪುರದಲ್ಲಿ ಮುಸ್ಲಿಮರು ಸಹಿತ ಕನ್ನಡ ಚೆನ್ನಾಗಿ ಮಾತನಾಡುತ್ತಿದ್ದರು. ಈಗ ಕನ್ನಡದ ವಿಚಾರವಾಗಿ ಸುಮ್ಮನೆ ಮಾತನಾಡುತ್ತಾರೆ. ರಾಜ್ಯೋತ್ಸವ ಅಂತಾ ಕನ್ನಡದ ಬಗ್ಗೆ ಬರೀ ಡಂಗುರ ಹಾಕುತ್ತಾರೆ. ಆದರೆ, ಕೃತಿಯಲ್ಲಿ ಯಾವುದೂ ಆಗಲ್ಲ. ವಿಧಾನಸೌಧದ ಮುಂದೆ 27 ಕೋಟಿ ರೂ.ಖರ್ಚು ಮಾಡಿ ಕನ್ನಡಾಂಬೆಯ ಕಂಚಿನ ಪ್ರತಿಮೆ ಹಾಕುತ್ತಾರೆ. ಆದರೆ, ಗಡಿನಾಡು ಭಾಗದಲ್ಲಿ ಕನ್ನಡ ಶಿಕ್ಷಕರೇ ಇಲ್ಲ. ಗಡಿನಾಡು ಭಾಗದಲ್ಲಿ ಕನ್ನಡ ಸತ್ತು ಹೋಗುತ್ತಿದೆ. 10 ಸಾವಿರ ಕೊಟ್ಟು ಅತಿಥಿ ಶಿಕ್ಷರನ್ನು ತಗೆದುಕೊಳ್ಳುತ್ತಿದ್ದಾರೆ ಎಂದರು.

ದೇವರಾಜ್ ಅರಸು ಕೇವಲ ಅಕ್ಕಿ ಕೊಡಲಿಲ್ಲ. ಅಕ್ಕಿ ಬೆಳೆಯುವ ಭೂಮಿ ಕೊಟ್ಟರು. ಈಗ ಒಂದು ಸಂಸಾರಕ್ಕೆ ಏನು ಸಮಸ್ಯೆ ಇದೆ, ಅದನ್ನು ಮೊದಲು ಬಗೆ ಹರಿಸಬೇಕಿದೆ. ಗ್ಯಾರಂಟಿ ಯೋಜನೆಗಳ ವಿಷಯದಲ್ಲಿ ಸಿದ್ದರಾಮಯ್ಯ ತಮಗೆ ತೋಚಿದ್ದನ್ನು ಮಾಡಿದ್ದಾರೆ. ಅದರ ಬದಲಿಗೆ ಜನರಿಗೆ ಬೇಕಾ? ಬೇಡವಾ? ಎಂದು ತಿಳಿದುಕೊಳ್ಳಬೇಕಿತ್ತು. ಗ್ಯಾರಂಟಿ ಕೇಳಿದ್ದು ಯಾರು ನಿಮಗೆ ಎಂದು ಎಚ್.ವಿಶ್ವನಾಥ ಪ್ರಶ್ನಿಸಿದರು.

ಮಕ್ಕಳಿಗೆ 1ರಿಂದ 10ನೇ ತರಗತಿಯರೆಗೆ ಉಚಿತ ಶಿಕ್ಷಣ ಕೊಡಬಹುದಿತ್ತು. ಒಳ್ಳೆಯ ಆಸ್ಪತ್ರೆಗಳಿಗೆ ಹೋದರೆ, ಎರಡು ದಿನದಲ್ಲಿ ಒಂದೂವರೆ ಲಕ್ಷ ಬಿಲ್ ಆಗುತ್ತದೆ. ಹೀಗಾಗಿ ಉಚಿತ ಆರೋಗ್ಯ ಕೊಡಬಹುದಿತ್ತು. ಆದರೆ, 130 ರೂಪಾಯಿ ಇದ್ದ ಒಂದು ಬಿಯರ್ ಬಾಟಲ್ 270 ರೂ. ಆಗಿದೆ. ಗಂಡನಿಗೆ ಹೆಂಡ ಕುಡಿಸಿ, ಹೆಂಡತಿಗೆ 2,000 ಕೊಟ್ಟರೆ ಏನಾಗುವುದಿದೆ ಎಂದು ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net