

ಹುಬ್ಬಳ್ಳಿ: ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಏನೇ ಅಭಿವೃದ್ಧಿ ಕಾರ್ಯಗಳು ಆಗಿದ್ದರೂ ಅದು ಬಿಜೆಪಿ ಅವಧಿಯಲ್ಲಿ, ಕಾಂಗ್ರೆಸ್ನವರು ಪ್ರತಿಯೊಂದು ಕೆಲಸಕ್ಕೂ ಅಡ್ಡಿಪಡಿಸುತ್ತಲೇ ಬಂದಿದ್ದಾರೆ, ಹಾಗಾಗಿ ಕ್ಷೇತ್ರದಲ್ಲಿ ಮತ ಕೇಳುವ ಅಧಿಕಾರ ಬಿಜೆಪಿಗೆ ಮಾತ್ರ ಇದೆ, ಮುಂಬರುವ ದಿನಗಳಲ್ಲಿ ಹಾವೇರಿ ಕ್ಷೇತ್ರವನ್ನು ಮಾದರಿಯಾಗಿ ರೂಪಿಸುವ ಆಲೋಚನೆಯನ್ನೂ ಪಕ್ಷ ಹೊಂದಿದ್ದು, ಈ ಕಾರ್ಯಕ್ಕೆ ಕ್ಷೇತ್ರದ ಜನ ಬೆಂಬಲ ನೀಡುವ ಸಂಪೂರ್ಣ ವಿಶ್ವಾಸವಿದೆ.
ಹಾವೇರಿ- ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಆತ್ಮವಿಶ್ವಾಸ ಮಾತುಗಳು ಇವು. ‘ವಿಜಯವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ಅನುಭವ, ಕ್ಷೇತ್ರದ ಜನರ ಆಶಯ, ಕೈಗೊಂಡ ಅಭಿವೃದ್ಧಿ ಕಾರ್ಯ ಇತ್ಯಾದಿಗಳ ಬಗ್ಗೆ ಹಂಚಿಕೊಂಡಿದ್ದಾರೆ.
ಪಕ್ಷದ ವರಿಷ್ಠರ ಸೂಚನೆಯಂತೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ. ಹಾಗೇ ಸವಾಲು ಎದುರಿಸುವುದಕ್ಕೂ ಸಜ್ಜಾಗಿರುವೆ. ಜತೆಗೆ ದೇಶವನ್ನು ಸಮಗ್ರವಾಗಿ ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಬೇಕು, ದೇಶದ ಆಗುಹೋಗುಗಳಲ್ಲಿ ಸಕ್ರಿಯವಾಗಿ ಭಾಗಿಯಾಗಬೇಕು ಎನ್ನುವ ಆಶಯ ನನ್ನಲ್ಲಿ ಮೂಡಿದೆ.
* ಹಾವೇರಿ ಜಿಲ್ಲೆಗೆ ಏನೇ ಕೊಡುಗೆ ನೀಡಿದ್ದರೂ ಅದು ಬಿಜೆಪಿ. ಕಾಂಗ್ರೆಸ್ ಸರ್ಕಾರದ ಕೊಡುಗೆ ಶೂನ್ಯವಾಗಿದೆ. ಹಾವೇರಿಗೆ ಮೆಡಿಕಲ್ ಕಾಲೇಜ್ 2012ರಲ್ಲೇ ಬರಬೇಕಿತ್ತು. ಅದನ್ನು ರದ್ದು ಮಾಡಿದ್ದು ಕಾಂಗ್ರೆಸ್. ನಾನು ಸಿಎಂ ಆದ ಮೇಲೆ ದುಡ್ಡು ಕೊಟ್ಟು ಕೆಲಸ ಆರಂಭಿಸಿದ್ದರಿಂದ ಇಂದು ಮುಗಿಯುತ್ತ ಬಂದಿದೆ.
ಹಾವೇರಿ ಹಾಲು ಒಕ್ಕೂಟ, ಮೆಗಾ ಡೇರಿ ಯೋಜನೆಗೆ 130 ಕೋಟಿ ರೂ. ನೀಡಿದ್ದೇನೆ. ಇದೀಗ ಹಾಲು ಉತ್ಪಾದನೆ ಹೆಚ್ಚಾಗಿದ್ದು, ಉತ್ಪಾದಕರ ಮುಖದಲ್ಲಿ ಮಂದಹಾಸ ಮೂಡಿದೆ.
ರಾಣೆಬೆನ್ನೂರಲ್ಲಿ 120 ಕೋಟಿ ರೂ. ವೆಚ್ಚದ ಮೆಗಾ ಮಾರ್ಕೆಟ್ ಸಿದ್ಧಗೊಂಡಿದೆ. ಬ್ಯಾಡಗಿಯಲ್ಲಿ ಮೆಣಸಿನಕಾಯಿ ಸಂಶೋಧನೆ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಎಂಟು ಕಡೆ ಏತ ನೀರಾವರಿ ಯೋಜನೆ ಜಾರಿಯಾಗಿದೆ.
ಮುಂಬೈ ಚೆನ್ನೈ ಇಂಡಸ್ಟ್ರಿಯಲ್ ಕಾರಿಡಾರ್ನಲ್ಲಿ ಹಾವೇರಿ ಬರುವುದರಿಂದ ಇಲ್ಲಿ ಟೌನ್ಶಿಪ್ಗಾಗಿ 400 ಎಕರೆ ಜಮೀನು ನೀಡಲಾಗಿದೆ. ದೊಡ್ಡ ಮಟ್ಟದಲ್ಲಿ ಮೂಲ ಸೌಕರ್ಯಕ್ಕೆ ಯೋಜನೆ ರೂಪಿಸಲಾಗಿದೆ. 500 ಕೋಟಿ ರೂ. ರಸ್ತೆಗಾಗಿ ನೀಡಲಾಗಿದೆ. 200 ಕೋಟಿ ರೂ.ಗಳನ್ನು ಗದಗ ಜಿಲ್ಲೆಯ ರಸ್ತೆಗಾಗಿ ನೀಡಲಾಗಿದೆ.
ಕುಡಿಯುವ ನೀರಿಗಾಗಿ 170 ಕೋಟಿ ರೂ. ಅಮೃತ ಯೋಜನೆ ಜಾರಿಯಾಗಿದೆ. ಜಿಲ್ಲೆಯ ಎಲ್ಲ ಹಳ್ಳಿಯ ಪ್ರತಿ ಮನೆಗೆ ನಿರಂತರ ನೀರು ಪೂರೈಸಲು ಜಲ್ಜೀವನ ಮಿಷನ್ ಅಡಿ ಎರಡೂ ಜಿಲ್ಲೆಗೆ 2 ಸಾವಿರ ಕೋಟಿ ನೀಡಲಾಗಿದೆ. ಲೋಕಸಭಾ ಕ್ಷೇತ್ರಕ್ಕೆ ಇವು ನನ್ನ ಕೊಡುಗೆಗಳಾಗಿವೆ ಎಂದು ವಿವರಿಸಿದರು.
* ಕ್ಷೇತ್ರದ ಜನರು ನನ್ನನ್ನು ಆಯ್ಕೆ ಮಾಡಲು ಅನೇಕ ಕಾರಣಗಳಿವೆ. ಜಲಸಂಪನ್ಮೂಲ ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಹಾವೇರಿ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದೇನೆ. ಶಿಗ್ಗಾಂವಿ ವಿಧಾನಸಭೆ ಕ್ಷೇತ್ರಕ್ಕೆ ಸೀಮಿತನಾಗದೇ ಹಾವೇರಿ ಹಾಗೂ ಗದಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಜಿಲ್ಲೆಯಲ್ಲಿ ಸುಮಾರು 1 ಲಕ್ಷ ಎಕರೆ ನೀರಾವರಿಗೆ ಒಳಪಡಿಸಲಾಗಿದೆ. ಸಿಂಗಟಾಲೂರು ಏತ ನೀರಾವರಿ ಯೋಜನೆ ಜಾರಿಯಾಗಿದ್ದು, ಶೀಘ್ರ ಪೂರ್ಣಗೊಳ್ಳಲಿದೆ. ಅಭಿವೃದ್ಧಿ ಪರ ಪಕ್ಷ ಹಾಗೂ ವೈಯಕ್ತಿಕವಾಗಿ ನಾನು ಜನರಿಗೆ ಹತ್ತಿರ ಇರುವುದರಿಂದ ಮತದಾರರಲ್ಲಿ ವಿಶ್ವಾಸ ಇದೆ. ಕಳೆದ 30 ವರ್ಷಗಳಿಂದ ಜನರು ನನ್ನನ್ನು ಬಲ್ಲರು. ಇದರ ಜತೆಗೆ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕೆಂಬ ಹಂಬಲ ಎಲ್ಲರಲ್ಲಿಯೂ ಇದೆ.
ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳು ಅಡ್ಡ ದಾರಿ ಹಿಡಿದಿವೆ. ಅನ್ನಭಾಗ್ಯದ 10 ಕೆಜಿ ಅಕ್ಕಿ ಕೊಡುತ್ತಿಲ್ಲ. 200 ಯೂನಿಟ್ ಕರೆಂಟ್ ಫ್ರೀ ಎಂದವರು ಕೇವಲ 50 ಯೂನಿಟ್ ಸಹ ನೀಡುತ್ತಿಲ್ಲ. ಗೃಹಲಕ್ಷ್ಮಿ ಕೇವಲ ಶೇ. 30ರಷ್ಟು ಮಹಿಳೆಯರಿಗೆ ಸಿಕ್ಕಿದೆ. ಉಳಿದವರು ಕೇಳಿದರೆ ತಾಂತ್ರಿಕ ಸಮಸ್ಯೆ ಅಂತಾರೆ, ಶಕ್ತಿ ಯೋಜನೆಯ ಉಚಿತ ಬಸ್ ಪ್ರಯಾಣವು ರ್ವಂಗ್ ವುಮೆನ್, ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆ ಮಾಡಿದೆ. ಸಾಮಾನ್ಯ ಮಹಿಳೆಯರು ಸಹ ಆರಾಮವಾಗಿ ಬಸ್ ಹತ್ತಿ ಹೋಗುವ ವ್ಯವಸ್ಥೆ ಇಲ್ಲ. ಇಷ್ಟೆಲ್ಲ ಉಚಿತ ಕೊಟ್ಟರೂ ಜನರ ಜೀವನ ಮಟ್ಟ ಮಾತ್ರ ಸುಧಾರಣೆಯಾಗಿಲ್ಲ. ರಾಜ್ಯದಲ್ಲಿಯೇ ಅವರ ಗ್ಯಾರಂಟಿ ಯಶಸ್ವಿಯಾಗಿಲ್ಲ. ಇನ್ನು ದೇಶ ಮಟ್ಟದಲ್ಲಿ ಸಾಧ್ಯವೇ ಇಲ್ಲ ಎಂಬುದನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ.
ಮುಸ್ಲಿಂ ಸಮುದಾಯದಲ್ಲಿ 23ರಿಂದ 24 ಜಾತಿಗಳು ಬಡತನದಲ್ಲಿವೆ. ಅವು ಈಗಾಗಲೇ 2ಬಿ ದಲ್ಲಿ ಬರುತ್ತವೆ. ಅವುಗಳನ್ನು ನಾವು ಮೀಸಲಾತಿಯಿಂದ ತೆಗೆದಿಲ್ಲ. ಆದರೆ, ಡಾ. ಅಂಬೇಡ್ಕರ್ ಅವರು ಧರ್ವಧಾರಿತ ಮೀಸಲಾತಿ ಬೇಡ ಎಂದರೂ ನೀಡಿದ್ದ ಮೀಸಲಾತಿಯನ್ನು ತೆಗೆದು ಹಿಂದುಳಿದ ವರ್ಗಕ್ಕೆ ಕೊಟ್ಟಿದ್ದೇವೆ. ಕಾಂಗ್ರೆಸ್ನವರು ಕೋರ್ಟ್ನಲ್ಲಿ ಚಾಲೆಂಜ್ ಮಾಡಿದ್ದಾರೆ. ಅಲ್ಲಿ ನಮ್ಮ ನಿಲುವು ಹೇಳುತ್ತೇವೆ.
* ಗದಗ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ನೀಡುವ ಕುರಿತು ಒಬ್ಬರಿಂದ ನಿರ್ಧಾರ ಮಾಡುವಂಥದ್ದಲ್ಲ. ರಾಜಕೀಯ ಏಕತೆ ಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಪರಿಶೀಲನೆ ನಡೆಯಬಹುದು.
ಪ್ರತಿ ಬಾರಿಯೂ ಮಹದಾಯಿ ಯೋಜನೆ ವಿಚಾರದಲ್ಲಿ ಅಡ್ಡಿಯಾಗಿದ್ದೇ ಕಾಂಗ್ರೆಸ್. ಗೋವಾ ನೆಲದಲ್ಲಿ ನಿಂತು ಹನಿ ನೀರೂ ಕೊಡಲ್ಲ ಎಂದವರು ಸೋನಿಯಾ ಗಾಂಧಿ. ಆಗಲೇ ಮನಮೋಹನ ಸಿಂಗ್ ಅವರಿಗೆ ಹೇಳಿ ನ್ಯಾಯಾಧೀಕರಣ ರಚನೆ ಮಾಡಿದರು. ಕುಡಿಯುವ ನೀರಿಗೆ ನ್ಯಾಯಾಧೀಕರಣ ರಚನೆಯಾಗಿದ್ದು ದೇಶದಲ್ಲಿ ಇದೇ ಮೊದಲು.
ಮಹದಾಯಿಯಿಂದ ಮಲಪ್ರಭಾಗೆ ನೀರು ಹರಿಸಲು ನನ್ನ ಅವಧಿಯಲ್ಲಿ ನಾನ್ ಫಾರೆಸ್ಟ್ ಏರಿಯಾದಲ್ಲಿ ಇಂಟರ್ಲಿಂಕಿಂಗ್ ಕೆನಾಲ್ ಮಾಡಲಾಗಿದೆ. ಅಲ್ಲಿ ನೀರು ಸಂಗ್ರಹಿಸಿ ಪೂರೈಕೆ ಮಾಡುವುದಷ್ಟೇ ಬಾಕಿ ಇದೆ. ಆದರೆ, ಕೋರ್ಟ್ನಲ್ಲಿ ಕಾಂಗ್ರೆಸ್ನವರು ಅಫಿಡೆವಿಟ್ ಸಲ್ಲಿಸಿ ಕೆನಾಲ್ಗೆ ಗೋಡೆ ಕಟ್ಟಿದರು. ಯಾವುದೇ ದೇಶದಲ್ಲಿ ನಡೆಯುತ್ತಿರುವ ಯೋಜನೆಗಳಿಗೆ ಗೋಡೆ ಕಟ್ಟಿದ ಉದಾಹರಣೆಗಳಿಲ್ಲ. ಅದನ್ನು ಕಾಂಗ್ರೆಸ್ ಮಾಡಿದೆ.
ನ್ಯಾಯಾಧೀಕರಣದ ತೀರ್ಪು ಗೆಜೆಟ್ ನೋಟಿಫಿಕೇಶನ್ ಮಾಡಿದ್ದು ಎನ್ಡಿಎ, ಫಾರೆಸ್ಟ್ ಕ್ಲಿಯರೆನ್ಸ್ ತೆಗೆದುಕೊಳ್ಳಬೇಕಾದ ಕಾಂಗ್ರೆಸ್ ಸರಿಯಾಗಿ ಸ್ಪಂದಿಸದೇ ರಾಜಕೀಯ ಅಸ್ತ್ರವಾಗಿ ಬಳಸುತ್ತಿದೆ. ರೈತರ ಪ್ರತಿಭಟನೆ ಸಂದರ್ಭದಲ್ಲಿ ರೈತರನ್ನು ನಿಲ್ಲಿಸಿ ಬಾಸುಂಡೆ ಬರುವಂತೆ ಹೊಡೆಸಿದವರು ಕಾಂಗ್ರೆಸ್ನವರು. ಮನೆಹೊಕ್ಕು ಮಹಿಳೆಯರನ್ನು ಹೊಡೆದರು. ಇದೆಲ್ಲ ರೈತ ಸಂಘದವರಿಗೆ ನೆನಪಿಲ್ಲವೇ?
ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಏನೇ ಅಭಿವೃದ್ಧಿ ಆಗಿದ್ದರೂ ಅದು ಬಿಜೆಪಿ ಅವಧಿಯಲ್ಲಿ. ಕಾಂಗ್ರೆಸ್ನವರು ತಂದಿರುವ ಒಂದೇ ಒಂದು ಯೋಜನೆಯನ್ನು ತೋರಿಸಿಬಿಡಲಿ. ಕಾಂಗ್ರೆಸ್ ಕೊಡುಗೆ ಜೀರೋ ಆಗಿದೆ.
* ರೈತ ವಿದ್ಯಾನಿಧಿಗೆ ಅತ್ಯುತ್ತಮ ಯೋಜನೆಯಾಗಿದೆ. ಇದನ್ನು ಮೋದಿ ಅವರು ಕೂಡ ಮೆಚ್ಚಿದ್ದಾರೆ. ದೇಶಾದ್ಯಂತ ಜಾರಿಯಾದರೆ ಅನುಕೂಲ. ಈ ಬಗ್ಗೆ ಆಶಾಭಾವನೆ ಇದೆ.
ಹಾವೇರಿ ಲೋಕಸಭಾ ಕ್ಷೇತ್ರವು ರಾಷ್ಟ್ರಮಟ್ಟದಲ್ಲಿ ಮಾದರಿಯಾಗಬೇಕು ಎಂಬ ಕನಸು ಹೊತ್ತಿರುವೆ. ನೀರಾವರಿ ಹಾಗೂ ಕೈಗಾರೀಕರಣ ನನ್ನ ಆದ್ಯತೆಗಳು. ಕೃಷಿ ಅಭಿವೃದ್ಧಿ ಮೂಲಕ ಜನರ ಜೀವನ ಮಟ್ಟ ಸುಧಾರಿಸುವ ಗುರಿ ಇದೆ. ಕೈಗಾರಿಕೆ ಬಂದರೆ ಉದ್ಯೋಗ ಸಿಗಲಿವೆ. ವಿಶೇಷವಾಗಿ ಎಸ್ಸಿಎಸ್ಟಿ, ಒಬಿಸಿ ಜನಾಂಗ ಹಾಗೂ ಮಹಿಳೆಯರಿಗೆ ಉತ್ತಮ ಶಿಕ್ಷಣ ಸಿಗಬೇಕು. ಅದಕ್ಕಾಗಿ ಕೇಂದ್ರೀಯ ಸಂಸ್ಥೆಗಳನ್ನು ಕ್ಷೇತ್ರಕ್ಕೆ ತರುವ ಯೋಜನೆ ಇದೆ. - ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ