

ವಿಜಯಪುರ: ನಗರದಲ್ಲಿರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಸುಮಾರು 150 ವರ್ಷಗಳ ಇತಿಹಾಸ ಹೊಂದಿದೆ. ಸದ್ಯ ಕಾಲೇಜಿನಲ್ಲಿ 6 ಸಾವಿರಕ್ಕೂ ಅಧಿಕ ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ಸರ್ಕಾರಿ ಬಾಲಕಿಯರ ಪ.ಪೂ. ಕಾಲೇಜಿನಲ್ಲಿ 2023-24 ಹಾಗೂ 24-25 ನೇ ಸಾಲಿನ ಕಾಲೇಜು ಅಭಿವೃದ್ಧಿ ಸಮಿತಿ ನಿಧಿಯಿಂದ ನಿರ್ಮಾಣ ಮಾಡಿದ ಸಭಾ ಭವನವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಸದ್ಯ ಕಾಲೇಜಿನಲ್ಲಿ ಮಕ್ಕಳ ಶಿಕ್ಷಣಕ್ಕೆ ಅವಶ್ಯಕತೆಯಿರುವ ಕೊಠಡಿಗಳು, ಲ್ಯಾಬ್, ಶೌಚಗೃಹ ಸೇರಿ ಮುಂತಾದ ಮೂಲ ಸೌಕರ್ಯವನ್ನು ಹಂತ ಹಂತವಾಗಿ ಕಲ್ಪಿಸಲಾಗಿದೆ. ಮುಂದೆಯೂ ಕೂಡ ಕಾಲೇಜು ಸೇರಿದಂತೆ ನಗರದಲ್ಲಿನ ಎಲ್ಲ ಸರ್ಕಾರಿ ಶಾಲಾ-ಕಾಲೇಜುಗಳ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡುವ ಮೂಲಕ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದರು.
ಅದಕ್ಕೂ ಮುನ್ನ 2022-23 ನೇ ಸಾಲಿನ ಜಿಪಂ ವಿವೇಕ ಶಾಲಾ ಕೊಠಡಿ ಯೋಜನೆಯಡಿ ಮಂಜೂರಾದ 1.25 ಕೋಟಿ ರೂ. ಗಳ ಅನುದಾನದಲ್ಲಿ ಹೊಸ 5 ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಬಾಲಕಿಯರ ಪ.ಪೂ. ಕಾಲೇಜು ಸುಧಾರಣಾ ಸಮಿತಿ ಸದಸ್ಯರು, ಪ್ರಾಚಾರ್ಯರು, ಸಿಬ್ಬಂದಿ ವರ್ಗ, ವಿದ್ಯಾರ್ಥಿನಿಯರು ಮತ್ತಿತರರಿದ್ದರು.