ಪಾಳುಬಿದ್ದ ಭರಣಿಕೆರೆ ಅಭಿವೃದ್ಧಿ : ಕೊಣಾಜೆಯಲ್ಲಿ ನೀಗಿತು ನೀರಿನ ಬವಣೆ : ಸೌಂದರ್ಯಕ್ಕೆ ಬೇಕಿದೆ ಅನುದಾನ

Published on

ಅನ್ಸಾರ್ ಇನೋಳಿ ಉಳ್ಳಾಲ

ಪಾಳುಬಿದ್ದ ಕೆರೆ ಅಭಿವೃದ್ಧಿಯಿಂದ ಅಂತರ್ಜಲ ವೃದ್ಧಿಯಾಗಿದೆ. ಹಲವು ವರ್ಷಗಳಿಂದ ಸ್ಥಳೀಯ ಪ್ರದೇಶದಲ್ಲಿ ಎದುರಾಗಿದ್ದ ನೀರಿನ ಬವಣೆಗೆ ಒಂದಷ್ಟು ಪರಿಹಾರ ಸಿಕ್ಕಂತಾಗಿದೆ. ಇನ್ನಷ್ಟು ಅನುದಾನ ಸಿಕ್ಕಿದಲ್ಲಿ ಕೆರೆ ವಿಸ್ತಾರದ ಜತೆ ಸೌಂದರ್ಯವನ್ನೂ ಹೆಚ್ಚಿಸುವ ಅವಕಾಶ ಕೊಣಾಜೆ ಭರಣಿಕೆರೆಗೆ ಲಭಿಸಲಿದೆ.

ಕೊಣಾಜೆಯಿಂದ ಗ್ರಾಮಚಾವಡಿಗೆ ಮುಖ್ಯ ರಸ್ತೆಯಲ್ಲಿ ಸಿಗುವ ಕೊಣಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಳಿಂಚಾಡಿಯಲ್ಲಿ ಭರಣಿಕೆರೆ ಇದೆ. ಗುಡ್ಡಕಾಡಿನಿಂದ ಆವೃತವಾಗಿರುವ ಈ ಪ್ರದೇಶದಲ್ಲಿ ಹಿಂದಿನಿಂದಲೂ ಕೆರೆಯಿತ್ತಾದರೂ ಹೂಳು ತುಂಬಿಕೊಂಡಿತ್ತು. ಅಲ್ಲದೆ ಈ ಕೆರೆಯ ನೀರು ನಾಲೆಯ ಮೂಲಕ ಮುಲಾರ, ಪರಂಡೆ, ದೋಟ, ರೆಂಜಾಡಿ, ಅಂಬ್ಲಮೊಗರು ಮೂಲಕ ನದಿ ಸೇರುತ್ತಿತ್ತು. ಗ್ರಾಮದಲ್ಲಿ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿತ್ತು. ಈ ಹಿನ್ನೆಲೆಯಲ್ಲಿ ಶೌಕತ್ ಅಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿದ್ದ ಸಂದರ್ಭ ಗ್ರಾಮದ ದಡಸ್ ಮತ್ತು ಭರಣಿಕೆರೆಗೆ ಪುನರ್‌ಜೀವ ನೀಡಿ ಅಂತರ್ಜಲ ವೃದ್ಧಿಗೆ ಮುಂದಾಗಿದ್ದರು. ಅದರಂತೆ ಭರಣಿಕೆರೆಯನ್ನು ಉದ್ಯೋಗ ಖಾತರಿ ಹಾಗೂ ಪಂಚಾಯಿತಿಯ ಹಣದಲ್ಲೇ ಅಭಿವೃದ್ಧಿಪಡಿಸಿ ಹರಿಯುವ ನೀರನ್ನು ತಡೆಯುವ ಪ್ರಯತ್ನ ಮಾಡಿದ್ದರು.

ವರ್ಷವಿಡೀ ನೀರು: ಗ್ರಾಮದ ಒಂದನೇ ವಾರ್ಡ್‌ನಲ್ಲಿರುವ ಭರಣಿಕೆರೆ ಒಂದು ಎಕರೆ ಜಮೀನಿನಲ್ಲಿ ಮುಖ್ಯ ರಸ್ತೆಯಿಂದ ಸುಮಾರು ಒಂದು ಕಿ.ಮೀ ನಷ್ಟು ದೂರದಲ್ಲಿದೆ. ಕಾಡಿನಿಂದ ಆವೃತವಾಗಿದ್ದರಿಂದ ಜನಸಂಚಾರ ವಿರಳ. ಆಸುಪಾಸಿನಲ್ಲಿ ಕೆಲವು ಮನೆಗಳಿದ್ದರೂ ಕೆರೆಯತ್ತ ಹೋಗುವುದು ಕಡಿಮೆ. ಕೆರೆಯನ್ನು ಅಭಿವೃದ್ಧಿಪಡಿಸಿದ ಬಳಿಕ ಮಳೆಗಾಲದಲ್ಲಿ ಸಂಗ್ರಹವಾಗುವ ನೀರು ವರ್ಷವಿಡೀ ಇರುತ್ತದೆ. ಹಿಂದೆ ನಾಲೆಯ ಮೂಲಕ ನೀರು ಹರಿಯುತ್ತಿತ್ತು. ಪ್ರಸ್ತುತ ತಡೆದಿರುವುದರಿಂದ ಕೆರೆಯಲ್ಲೇ ನಿಲ್ಲುತ್ತಿದೆ.

ಗ್ರಾಮಸ್ಥರಲ್ಲಿ ಆಶಾಭಾವನೆ ಕಾಡು ಪ್ರಾಣಿಗಳ ಸಂಚಾರ ಇದ್ದರೂ ಜನಸಂಚಾರ ಇಲ್ಲದ ಕಾರಣ ನೀರು ಅತ್ಯಂತ ಶುದ್ಧವಾಗಿದೆ. ವರ್ಷವಿಡೀ ನೀರು ಇರುವುದರಿಂದ ಸ್ಥಳೀಯ ವಾರ್ಡ್‌ನ ನೀರಿನ ಸಮಸ್ಯೆಗೆ ಒಂದಷ್ಟು ಮುಕ್ತಿ ಸಿಕ್ಕಿದೆ. ಹಿಂದೆ ಬೇಸಿಗೆಯಲ್ಲಿ ಬತ್ತುತ್ತಿದ್ದ ಕೊಳವೆಬಾವಿಗಳಿಗೆ ಭರಣಿಕೆರೆ ಜೀವ ತುಂಬಿದೆ. ಕೃಷಿಕರಿಗೂ ಪ್ರಯೋಜನವಾಗಿದೆ. ಕೆರೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಸೌಂದರ್ಯಗೊಳಿಸಬೇಕಿದ್ದು ಇದಕ್ಕೆ 75 ಲಕ್ಷದಷ್ಟು ಅನುದಾನದ ಅಗತ್ಯವಿದೆ. ಶಾಸಕರು ಕೆರೆಯ ಅಭಿವೃದ್ಧಿಗೆ ಆಸಕ್ತಿ ಹೊಂದಿರುವುದು ಗ್ರಾಮಸ್ಥರು ಮತ್ತು ಜನಪ್ರತಿನಿಧಿಗಳಲ್ಲಿ ಆಶಾಭಾವನೆ ಮೂಡಿಸಿದೆ.

ಹಿಂದಿನ ಅಧ್ಯಕ್ಷ ಶೌಕತ್ ಅಲಿ ಅವರ ಮುತುವರ್ಜಿಯಿಂದ ಭರಣಿಕೆರೆ ಅಭಿವೃದ್ಧಿ ಕಾಣುವಂತಾಗಿದೆ. ಸ್ಥಳೀಯ ಭಾಗದಲ್ಲಿ ನೀರಿನ ಸಮಸ್ಯೆ ಕಡಿಮೆಯಾಗಿದೆ. ಕೆರೆ ಇನ್ನಷ್ಟು ಅಭಿವೃದ್ಧಿಗೊಳ್ಳುವ ಅಗತ್ಯವಿದ್ದು, ಅನುದಾನಕ್ಕೆ ಶಾಸಕರಲ್ಲಿ ಮನವಿ ಮಾಡಲಾಗಿದೆ. ಅವರಿಂದ ಪೂರಕ ಸ್ಪಂದನೆ ಸಿಕ್ಕಿದೆ. ಇಕ್ಬಾಲ್ ಕೊಣಾಜೆ, ಕೊಣಾಜೆ ಗ್ರಾ.ಪಂ. ಸದಸ್ಯ ಕೊಣಾಜೆ ಗ್ರಾಮದಲ್ಲಿ ಸಾಕಷ್ಟು ಸಣ್ಣ ಕೆರೆಗಳಿವೆ. ಇವುಗಳ ಅಭಿವೃದ್ಧಿಯಾದರೆ ಬೇಸಿಗೆಯಲ್ಲಿ ನೀರನ ಸಮಸ್ಯೆಗೆ ಬಹುತೇಕ ಪರಿಹಾರ ಲಭಿಸಲಿದ್ದು, ಈ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ. ಭರಣಿಕೆರೆ ಅಭಿವೃದ್ಧಿಯಿಂದ ಸ್ಥಳೀಯ ಭಾಗದಲ್ಲಿ ಕೃಷಿಗೂ ನೀರು ಲಭಿಸಿದೆ. ಅಚ್ಚುತ ಗಟ್ಟಿ, ಕೊಣಾಜೆ ಗ್ರಾ.ಪಂ.ಮಾಜಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net