ಸಂಪರ್ಕ ರಸ್ತೆಗಳ ಅಭಿವೃದ್ಧಿ ಆದ್ಯತೆ

kdr2
Published on

ಕಡೂರು: ಬಹುದಿನಗಳ ಬೇಡಿಕೆಯಾಗಿದ್ದ ಯಳ್ಳಂಬಳಸೆ-ಯಳಗೊಂಡನಹಳ್ಳಿ ಗ್ರಾಮದ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ತಾಲೂಕಿನ ಯಳ್ಳಂಬಳಸೆ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ಅಪೆಂಡಿಕ್ಸ್-ಇ ಅನುದಾನದಡಿ 2.60 ಕೋಟಿ ರೂ. ವೆಚ್ಚದ ಯಳ್ಳಂಬಳಸೆ-ಯಳಗೊಂಡನಹಳ್ಳಿ-ಖಂಡುಗದಹಳ್ಳಿ ಗೇಟ್‌ವರೆಗಿನ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಕ್ಷೇತ್ರದಲ್ಲಿ 350ಕ್ಕೂ ಹೆಚ್ಚು ಹಳ್ಳಿಗಳಿದ್ದು , ಗ್ರಾಮಗಳ ಅಭಿವೃದ್ಧಿಗಾಗಿ ಹಂತ ಹಂತವಾಗಿ ಪ್ರಯತ್ನಿಸಲಾಗುತ್ತಿದೆ. ಭದ್ರಾ ಉಪಕಣಿವೆ ಯೋಜನೆಯಲ್ಲಿ ಎರಡನೇ ಹಂತವನ್ನು ನಬಾರ್ಡ್ ಯೋಜನೆಗೆ ಸೇರಿಸುವ ಜತೆಗೆ ಮೂರನೇ ಹಂತಕ್ಕೆ 407 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿಸಲಾಗಿದೆ ಎಂದರು.

ಯೋಜನೆಯ ಮೊದಲ ಮತ್ತು ಎರಡನೇ ಹಂತದ ಕಾಮಗಾರಿ ಪೂರ್ಣಗೊಂಡ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯ ಅರನ್ನು ಕರೆಸಿ ಉದ್ಘಾಟನೆ ಮಾಡಿಸಲಾಗುವುದು. ಯಳ್ಳಂಬಳಸೆ ಕೆರೆಗೂ ಈ ಯೋಜನೆಯಲ್ಲಿ ನೀರು ಹರಿದು ಬರಲಿದ್ದು ಬರಪೀಡಿತ ಪ್ರದೇಶದ ಹಣೆಪಟ್ಟಿ ಕಳಚುವ ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದರು.

ಗ್ರಾಮದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಇರುವ ಕೆಕೆಜಿಬಿ(ಕರ್ನಾಟಕ ಕಸ್ತೂರಬಾ ವಸತಿನಿಲಯ) ಹಾಸ್ಟೆಲ್‌ಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಬೇಡಿಕೆ ಬಂದಿದೆ. ಮೊದಲು ಈ ಹಾಸ್ಟೆಲ್‌ಅನ್ನು ಬಿಸಿಎಂ ಅಥವಾ ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಿ ನಂತರ ಹೊಸ ಕಟ್ಟಡ ನಿರ್ಮಾಣ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು. ಯಳ್ಳಂಬಳಸೆಯಿಂದ ಮಾದಾಪುರ ಗ್ರಾಮದ ರಸ್ತೆಯನ್ನೂ ಅಭಿವೃದ್ಧಿಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.

ಕೆ.ಬಿದರೆ ಸಮೀಪದ ಕಂಚುಗಲ್ ಗ್ರಾಮದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಯಳ್ಳಂಬಳಸೆ ಗ್ರಾಪಂ ಅಧ್ಯಕ್ಷೆ ದೀಪಾ ಹನುಮಂತಪ್ಪ, ಉಪಾಧ್ಯಕ್ಷೆ ಚೈತ್ರಾ ರವಿಕುಮಾರ್,ವೈ.ಎಲ್.ನವೀನ್‌ಕುಮಾರ್, ಶ್ರೀನಿವಾಸ್, ಸಲೀಂ ಅಹಮದ್, ಸದಸ್ಯರಾದ ಶ್ರೀನಿವಾಸ್, ಸೈಯಾದ್ ಸಲೀಂ, ಪ್ರೇಮಾವತಿ, ಈಶ್ವರಪ್ಪ, ಸೋಮೇಶ್, ನಾಗೇಂದ್ರ, ಸಂದೀಪ್, ಗ್ರಾಮಸ್ಥರಾದ ಎಸ್.ಕೆ.ಜಗದೀಶ್, ಅಹಮದ್ ಜಾನ್, ಷಫಿಉಲ್ಲಾ, ಮೊಯಿದ್ದೀನ್ ಎಇಇ ಬಸವರಾಜ್‌ನಾಯ್ಕ, ಅಬಿದ್ ಪಾಷಾ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net