

ಚಿತ್ರದುರ್ಗ: ಕಳೆದ ಮೂವತ್ತು ವರ್ಷಗಳಿಂದ ಅಭಿವೃದ್ಧಿ ಕಾಣದ ಚಿತ್ರದುರ್ಗ ಕ್ಷೇತ್ರದಲ್ಲಿ ಬದಲಾವಣೆ ತರಲು ಜನರು ದಿಟ್ಟ ಹೆಜ್ಜೆ ಇಡಬೇಕು ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವಿರೇಂದ್ರ ಪಪ್ಪಿ ಹೇಳಿದರು.
ನಗರದ ವಿನಾಯಕ ಕಲ್ಯಾಣ ಮಂಟಪದಲ್ಲಿ ಅಭಿಮಾನಿಗಳ ಬಳಗ ಸೋಮವಾರ ಏರ್ಪಡಿಸಿದ್ದ ಅಭಿಮಾನೋತ್ಸವದಲ್ಲಿ ಮಾತನಾಡಿ, ನವ ಚಿತ್ರದುರ್ಗದ ನಿರ್ಮಾಣಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದರು.
ನಗರದಲ್ಲಿ ಅವೈಜ್ಞಾನಿಕ ರಸ್ತೆ, ವಿಭಜಕಗಳನ್ನು ನಿರ್ಮಿಸಲಾಗಿದೆ ಎಂದು ದೂರಿದ ಅವರು ಈ ಚುನಾವಣೆಯಲ್ಲಿ ಸ್ವಲ್ಪ ಎಚ್ಚರ ತಪ್ಪಿದರೆ ಮತ್ತೆ ಹಳಬರು ಆಯ್ಕೆಯಾಗುತ್ತಾರೆ. ಅವ್ಯವಹಾರ ಮುಂದುವರಿಯುತ್ತದೆ ಎಂದು ಎಚ್ಚರಿಸಿದರು.
ಚಿತ್ರದುರ್ಗ ಮಾದರಿ ಕ್ಷೇತ್ರವಾಗಲು ಈಗಿನಿಂದಲೇ ಜನರಿಗೆ ಮನದಟ್ಟು ಮಾಡುವ ಕೆಲಸ ಕೈಗೊಳ್ಳಬೇಕು ಎಂದರು. ಪಕ್ಷದ ಗ್ಯಾರಂಟಿ ಸ್ಕೀಂಗಳ ಕುರಿತು ವಿವರಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಎಚ್ ಮಂಜಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಎಸ್‌ಎಂಎಲ್ ತಿಪ್ಪೇಸ್ವಾಮಿ, ಕುರುಬ ಸಮಾಜದ ಜಿಲ್ಲಾಧ್ಯಕ್ಷ ಎಸ್.ಶ್ರೀರಾಮ್, ಕರವೇ ಅಧ್ಯಕ್ಷ ಮಂಜುನಾಥ್, ಕಾಂಗ್ರೆಸ್ ಎಸ್‌ಟಿ ಘಟಕದ ಜಿಲ್ಲಾಧ್ಯಕ್ಷ ಎಚ್.ಅಂಜನಪ್ಪ, ಜ್ಯೋತಿರಾಜ್, ಪ್ರಕಾಶ್ ರಾಮನಾಯ್ಕ, ಪರಮೇಶ್ ಸಿದ್ದಾಪುರ, ಕಾರ್ತಿಕ್ ಇತರರು ಇದ್ದರು.