

ಶ್ರೀರಂಗಪಟ್ಟಣ: ತಾಲೂಕಿನ ಚಿಕ್ಕಅಂಕನಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಗ್ರಾಮಸ್ಥರ ಬಹುಬೇಡಿಕೆಯ ರಸ್ತೆ ಸಂಪರ್ಕವನ್ನು ಅಭಿವೃದ್ಧಿಗೊಳಿಸಲು ಚಾಲನೆ ನೀಡಲಾಗಿದ್ದು, ಶೀಘ್ರವೇ ಗುಣಮಟ್ಟದ ರಸ್ತೆ ನಿರ್ಮಿಸಲಾಗುವುದು ಎಂದು ಶಾಸಕರೂ ಆದ ಸೆಸ್ಕ್ ಅಧ್ಯಕ್ಷ ರಮೇಶ ಬಂಡಿಸಿದ್ದೇಗೌಡ ಹೇಳಿದರು.
ತಾಲೂಕಿನ ಚಿಕ್ಕಅಂಕನಹಳ್ಳಿ ಗ್ರಾಮದಲ್ಲಿ ಬುಧವಾರ ಲೋಕೋಪಯೋಗಿ ಇಲಾಖೆ ಒಆರ್‌ಎಸ್ ಯೋಜನೆಯಲ್ಲಿ 9 ಕೋಟಿ ರೂ.ವೆಚ್ಚದಲ್ಲಿ ಚಿಕ್ಕಅಂಕನಹಳ್ಳಿ, ಸುಗ್ಗನಹಳ್ಳಿ, ಕೊಕ್ಕರೆಹುಂಡಿ, ಮಹದೇವಪುರ ವ್ಯಾಪ್ತಿಯ ಗ್ರಾಮಗಳಿಗೆ ಸರಪಳಿ ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಮಾತನಾಡಿದರು.
ತಾಲೂಕಿನಲ್ಲಿ ಈ ಕಾಮಗಾರಿ ಜಾರಿಗೆ ತರಲು ಸಾಕಷ್ಟು ಆಸಕ್ತಿ ತೋರಲಾಗಿದ್ದು, ಇದು ಈ ಭಾಗದ ಸುತ್ತಳ್ಳಿ ಜನರ ಒಕ್ಕೊರಲ ಬೇಡಿಕೆಯಾಗಿತ್ತು. ರಾಜ್ಯ ಸರ್ಕಾರ ಗ್ರಾಮೀಣ ಭಾಗದ ರಸ್ತೆಗಳನ್ನು ಅತ್ಯುತ್ತಮವಾಗಿ ಅಭಿವೃದ್ಧಿಪಡಿಸಲು ಸಾಕಷ್ಟು ಮುತುವರ್ಜಿ ತೋರಿದ್ದು, ರೈತಾಪಿ ಜನರ ಸಂಚಾರಕ್ಕೆ ಅನುಕೂಲಕ್ಕೆ ರಸ್ತೆ, ಸೇತುವೆ ಹಾಗೂ ಸ್ವಚ್ಛತೆಗೆ ಚರಂಡಿಗಳ ನಿರ್ಮಾಣಕ್ಕೆ ಹಲವು ಸೌಲಭ್ಯಗಳನ್ನು ಕಲ್ಪಿಸಿ ಆದ್ಯತೆ ನೀಡಿದೆ. ಶೀಘ್ರದಲ್ಲೇ ಸಂಬಂಧಪಟ್ಟ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸಿ ಜನರ ಬಳಕೆಗೆ ನೀಡಬೇಕು ಎಂದರು.
ವಿಎಸ್‌ಎಸ್‌ಎನ್ ಅಧ್ಯಕ್ಷ ನಾಗರಾಜು, ಮಾಜಿ ಅಧ್ಯಕ್ಷ ಶಿವಣ್ಣ ಗಿರೀಶ್, ಚಿಕ್ಕಅಂಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೆನ್ನಮ್ಮ, ಕಾಂಗ್ರೆಸ್ ಮುಖಂಡ, ಗುತ್ತಿಗೆದಾರ ಸುಗ್ಗನಹಳ್ಳಿ ಕೃಷ್ಣ, ಗುತ್ತಿಗೆದಾರ ಹುರುಳಿಕ್ಯಾತನಹಳ್ಳಿ ಶಿವಕುಮಾರ್, ಗ್ರಾಮದ ಮುಖಂಡರಾದ ದೇಸಿಲಿಂಗೇಗೌಡ, ಅಭಿಷೇಕ್ ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಲಿಂಗೇಗೌಡ, ಲೋಕೋಪಯೋಗಿ ಇಲಾಖೆ ಎಇಇ ಜಸ್ವಂತ್ ಪಂಡಿತ್, ಗುತ್ತಿಗೆದಾರ ಮನ್ವಂತ್, ರಾಜಸ್ವ ನಿರೀಕ್ಷಕ ರೇವಣ್ಣ, ವಿಎ ಕುಬೇರ, ಗ್ರಾಪಂ ಪಿಡಿಒ ದೇವೇಗೌಡ, ಕಾರ್ಯದರ್ಶಿ ವಿ.ಮನೋಹರ್, ಬಸವರಾಜು ಇತರರು ಇದ್ದರು.