

ಪಡುಬಿದ್ರಿ: 25 ವರ್ಷಗಳಿಂದಲೂ ನಿರಂತರ ಹೋರಾಟ ನಡೆಸುತ್ತಿದ್ದರೂ ಬೆಳಪು(ಪಡುಬಿದ್ರಿ) ರೈಲು ನಿಲ್ದಾಣ ಅಭಿವೃದ್ಧಿ ಬಗ್ಗೆ ಕೊಂಕಣ ರೈಲ್ವೆ ವಿಭಾಗ ನಿರ್ಲಕ್ಷ ಖಂಡಿಸಿ ಬೃಹತ್ ಪ್ರತಿಭಟನೆ ಹಾಗೂ ರೈಲ್ ರೋಕೋ ನಡೆಸಲು ಬೆಳಪು ಗ್ರಾಮಸ್ಥರು ಮತ್ತು ರೈಲ್ವೆ ಹೋರಾಟ ಸಮಿತಿ ತೀರ್ಮಾನಿಸಿದೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ಪ್ರಸ್ತುತ ರೈಲು ನಿಲ್ದಾಣದಲ್ಲಿ ಮಂಗಳೂರು-ಮಡಂಗಾವ್ ನಡುವೆ ಸಂಚರಿಸುವ ಪ್ಯಾಸೆಂಜರ್ ಟ್ರೈನ್ ಮಾತ್ರ ನಿಲುಗಡೆಯಾಗುತ್ತಿದೆ. ಕರೊನಾ ಪೂರ್ವದಲ್ಲಿ ಇಲ್ಲಿ ನಿಲುಗಡೆಯಾಗುತ್ತಿದ್ದ ವೇರಾವೆಲ್-ಗುಜರಾತ್ ಎಕ್ಸ್‌ಪ್ರೆಸ್ ಮತ್ತು ಡೆಮು ಎಕ್ಸ್‌ಪ್ರೆಸ್ ನಿಲುಗಡೆ ಹಿಂಪಡೆಯಲಾಗಿದೆ. ಗ್ರಾಮೀಣ ಭಾಗದ ಜನರಿಂದ ಹೆಚ್ಚು ಬೇಡಿಕೆಯಿರುವ ಮತ್ಸೃಗಂಧ ಎಕ್ಸ್‌ಪ್ರೆಸ್, ಸಿಎಸ್‌ಟಿ ಎಕ್ಸ್‌ಪ್ರೆಸ್ ಮತ್ತು ಯಶವಂತಪುರ-ಕಾರವಾರ ರೈಲು ನಿಲುಗಡೆಗೆ ಅವಕಾಶ ಮಾಡಬೇಕು. ರೈಲ್ವೆ ನಿಲ್ದಾಣಕ್ಕೆ ತೆರಳುವ ಪಣಿಯೂರು-ರೈಲ್ವೆ ನಿಲ್ದಾಣ ರಸ್ತೆ, ಬೆಳಪು-ರೈಲ್ವೆ ನಿಲ್ದಾಣ ರಸ್ತೆ ಹಾಗೂ ಬೆಳಪು ರೈಲ್ವೆ ಮೇಲ್ಸೇತುವೆ ಸಂಪೂರ್ಣ ಹದಗೆಟ್ಟಿದ್ದು ರಸ್ತೆ ದುರಸ್ತಿಗೆ ಆದ್ಯತೆ, ಇಲ್ಲಿನ ರಸ್ತೆ ಬದಿಗಳಲ್ಲಿ ಬೀದಿ ದೀಪದ ವ್ಯವಸ್ಥೆ ಕಲ್ಪಿಸಬೇಕು. ಬೆಳಪು ರೈಲು ನಿಲ್ದಾಣದ ಹೆಸರನ್ನು ಪಡುಬಿದ್ರಿ ಬದಲಿಗೆ ಪಣಿಯೂರು ಎಂದು ಪುನಃ ನಾಮಕರಣ ಮಾಡಿ ಬೆಳಪು ಗ್ರಾಮಕ್ಕೆ ಗೌರವ ನೀಡುವುದು. ನಮ್ಮ ಬೇಡಿಕೆಗಳಿಗೆ ಇನ್ನೂ ಸೂಕ್ತ ಸ್ಪಂದನೆ ಅಥವಾ ಪ್ರತಿಕ್ರಿಯೆಗಾಗಿ ಒಂದು ತಿಂಗಳು ಕಾಲಾವಕಾಶ ನೀಡುತ್ತಿದ್ದೇವೆ. ಸೂಕ್ತ ಸ್ಪಂದನೆ ದೊರಕದಿದ್ದಲ್ಲಿ ಸಾವಿರಾರು ಮಂದಿಯನ್ನು ಸೇರಿಸಿ ಬೃಹತ್ ಪ್ರತಿಭಟನೆ ಮತ್ತು ರೈಲ್ ರೋಕೋ ನಡೆಸುವುದಾಗಿ ಅವರು ಇಲಾಖೆಯನ್ನು ಎಚ್ಚರಿಸಿದ್ದಾರೆ.