

9 ಕೋಟಿ ರೂ.ಅನುದಾನದಲ್ಲಿ ನಗರದಲ್ಲಿ ಇನ್ನೂ 28 ಉದ್ಯಾನಗಳ ಅಭಿವೃದ್ಧಿ
ಚಿತ್ರದುರ್ಗ: ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಮತದಾರರ ಋಣ ತೀರಿಸುವ ಕೆಲಸ ಮಾಡಿದ್ದೇನೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ಧವಳಗಿರಿ ಬಡಾವಣೆ 3ನೇ ಹಂತದಲ್ಲಿ ಮಂಗಳವಾರ ಸಿ.ಸಿ.ರಸ್ತೆ ಕಾಮಗಾರಿ ಮತ್ತು ನೂತನ ಉದ್ಯಾನ ಉದ್ಘಾಟಿಸಿ ಮಾತನಾಡಿ, ಧವಳಗಿರಿ ಹೊಸ ಬಡಾವಣೆಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸ ಬೇಕಿದೆ. ಈ ಬಡಾವಣೆ 3 ನೇ ಹಂತ ರಸ್ತೆಗಳ ಅಭಿವೃದ್ಧಿಗೆ ಒಂದು ಕೋಟಿ ರೂ.ಅನುದಾನ ನೀಡಿದ್ದು,ಒಂದು ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಇಲ್ಲಿ ಇನ್ನು ಹಲವು ಅಭಿವೃದ್ಧಿ ಕೆಲಸಗಳು ಆಗ ಬೇಕಿದ್ದು,ಹಂತ,ಹಂತವಾಗಿ ಅನುದಾನ ನೀಡುತ್ತೇನೆ.
ಧವಳಗಿರಿ ಬಡಾವಣೆ ಸೇರಿ ವಿವಿಧ ಭಾಗಗಳಲ್ಲಿ ಪೈಪ್‌ಲೈನ್ ಮೂಲಕ ಮನೆ,ಮನೆಗೆ ಅಡುಗೆ ಅನಿಲ ಸಂಪರ್ಕ ಕಾಮಗಾರಿ ಪ್ರಗತಿಯಲ್ಲಿದೆ. ಉದ್ಯಾನವನ್ನು ಕುಡಾ ಅಭಿವೃದ್ಧಿ ಪಡಿಸಿದೆ. ನಗರದಲ್ಲಿ 45ಕ್ಕೂ ಅಧಿಕ ಉದ್ಯಾನಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಸಿಎಂ ಬಸವರಾಜ ಬೊಮ್ಮಾ ಯಿ ಅವರು ಬಿಡುಗಡೆ ಮಾಡಿರುವ 9 ಕೋಟಿ ರೂ.ಅನುದಾನದಲ್ಲಿ 28 ಉದ್ಯಾನಗಳನ್ನು ಅಭಿವೃದ್ಧಿ ಪಡಿಸಲಾಗುವುದು. ನನ್ನ ಕ್ಷೇತ್ರದ ಎಲ್ಲ ಕಡೆಗಳಲ್ಲಿ.ಸಿ.ಸಿ.ರಸ್ತೆ ನಿರ್ಮಾಣ,ಕುಡಿಯುವ ನೀರಿನ ವ್ಯವಸ್ಥೆ,ಬೀದಿ ದೀಪ,ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗಿದೆ.
ಕ್ಷೇತ್ರದಲ್ಲಿ ಅಂದಾಜು 583 ಕೋಟಿ ರೂ.ವೆಚ್ಚದಲ್ಲಿ 183 ಹಳ್ಳಿಗಳಿಗೆ ವಾಣಿ ವಿಲಾಸದಿಂದ ಕುಡಿಯುವ ನೀರಿನ ಸಂಪರ್ಕ ಕಾಮಗಾರಿ ನಡೆದಿದೆ. ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡಿಲ್ಲ. ಕಳೆದ 6 ಚುನಾವಣೆಗಳಲ್ಲಿ ಜನ ನನ್ನನ್ನು ಗೆಲ್ಲಿಸಿದ್ದಾರೆ. ಜನರೇ ನನಗೆ ಸುಪ್ರೀಂ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಜಿ.ಟಿ.ಸುರೇಶ್ ಸಿದ್ದಾಪುರ,ನಗರಸಭೆ ಸದಸ್ಯರಾದ ಶ್ರೀನಿವಾಸ್,ಜಯಣ್ಣ,ಬಾಲಮ್ಮ,ಕುಡಾ ಸದಸ್ಯರಾದ ವಿ.ಆರ್.ನಾಗರಾಜ್,ರೇಖಾ,ರೈತರಾಜು,ಮುಖಂಡರಾದ ಪರಮೇಶ್,ನಿಶಾನಿ ಶಂಕರ್,ಕುರಿ ನಾಗರಾಜ್ ಇತರರು ಇದ್ದರು.