

ಹೊನ್ನಾಳಿ: ಅಗತ್ಯ ಮೂಲಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿ ಪಟ್ಟಣದ ಟಿ.ಬಿ. ವೃತ್ತದ ಮೂಲ ನಿವಾಸಿಗಳು ಶಾಸಕ ಡಿ.ಜಿ. ಶಾಂತನಗೌಡ ಅವರ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದರು.
ವರ್ಷದ ಹಿಂದೆ ನಮ್ಮ ಟಿ.ಬಿ.ವೃತ್ತ ಎಚ್.ಕಡದಕಟ್ಟೆ ಗ್ರಾಪಂ ವ್ಯಾಪ್ತಿಗೆ ಒಳಪಟ್ಟಿತ್ತು. ಆದರೆ, ಟಿ.ಬಿ.ವೃತ್ತ ಹಾಗೂ ಹಿರೇಮಠ ಪರಸಭೆ ವ್ಯಾಪ್ತಿಗೆ ಸೇರಿಸಿ ಹಿಂದಿನ ಸರ್ಕಾರ ಆದೇಶ ಹೊರಡಿಸಿದ್ದರಿಂದ ನಾವುಗಳು ಪುರಸಭೆಯ ವ್ಯಾಪ್ತಿಗೆ ಬಂದರೂ ನಮಗೆ ಮೂಲ ಸೌಕರ್ಯ ಒದಗಿಸಿಕೊಡುವಲ್ಲಿ ವಿಫಲರಾಗಿದ್ದಾರೆ ಎಂದು ಅಲ್ಲಿನ ನಿವಾಸಿಗಳು ದೂರಿದರು.
ಸಮಸ್ಯೆಗಳ ಬಗ್ಗೆ ಪುರಸಭೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಈಗತಾನೆ ನಮ್ಮ ವ್ಯಾಪ್ತಿಗೆ ಸೇರಿದೆ. ಮುಂದಿನ ದಿನಗಳಲ್ಲಿ ಅನುದಾನ ನೀಡಿ ಅಭಿವೃದ್ಧಿ ಮಾಡುತ್ತೇವೆ ಎನ್ನುತ್ತಾರೆ ಎಂದು ಅಧಿಕಾರಿಗಳ ವಿರುದ್ಧ ಆರೋಪಿಸಿದರು.
ಶಿವಮೊಗ್ಗಕ್ಕೆ ಹೋಗುವ ರಸ್ತೆಯ ಎಡ ಭಾಗದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಮಳೆಗಾಲದಲ್ಲಿ ಚರಂಡಿ ನೀರೆಲ್ಲ ರಸ್ತೆಗೆ ಬರುತ್ತದೆ, ಅದರಲ್ಲೇ ನಾವು ಓಡಾಡಬೇಕಾದ ದುಸ್ಥಿತಿ ಇದೆ ಎಂದರು.
ಕಳೆದ 30 ವರ್ಷಗಳಿಂದ ಇಲ್ಲಿನ ರಸ್ತೆಗಳು ಕಾಂಕ್ರಿಟ್ ಕಂಡಿಲ್ಲ, ಚರಂಡಿ ಇಲ್ಲ, ಒಟ್ಟಾರೆ ಇಲ್ಲಿ ಅಭಿವೃದ್ಧಿ ಎಂಬುದೇ ಮರೀಚಿಕೆಯಾಗಿದೆ ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಡಿ.ಜಿ. ಶಾಂತನಗೌಡ, ನಿಮ್ಮ ಸಮಸ್ಯೆ ನನ್ನ ಗಮನಕ್ಕೂ ಬಂದಿದೆ. ಶೀಘ್ರ ಅಧಿಕಾರಿಗಳ ಜತೆ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಅಭಿವೃದ್ಧಿ ಬಗ್ಗೆ ಪಟ್ಟಿ ಮಾಡಿ ಅಧಿಕಾರಿಗಳ ಜತೆ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದರು.
ಶಿಕ್ಷಕ ಸಿದ್ದೇಶ್, ಸೋಮಶೇಖರ್, ಶರತ್, ಎಂ. ಬಸವರಾಜಪ್ಪ, ಅಬ್ದಲ್‌ವಾಜೀದ್, ದ್ಯಾಮಣ್ಣ, ಮಹಾಂತೇಶ್, ರಾಘವೇಂದ್ರಚಾರ್, ಕರವೇ ವಿನಯ್‌ಕುಮಾರ್, ಪುಟ್ಟಸ್ವಾಮಿ ಇತರರು ಇದ್ದರು.