

ಶಿವಮೊಗ್ಗ: ನನ್ನನ್ನು ಟೀಕಿಸುವವರಿಗೆ ನಾನು ಮಾಡಿದ ಅಭಿವೃದ್ಧಿ ಕಾರ್ಯಗಳೇ ಉತ್ತರ. 10 ವರ್ಷಗಳಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳಿಗೆ 20 ಸಾವಿರ ಕೋಟಿ ರೂ. ಅನುದಾನ ತಂದಿದ್ದೇನೆ. ಅದರಲ್ಲಿ 18 ಸಾವಿರ ಕೋಟಿ ರೂ. ಶಿವಮೊಗ್ಗ ಜಿಲ್ಲೆಗೆ ಬಂದಿದೆ ಎಂದು ಬಿ.ವೈ.ರಾಘವೇಂದ್ರ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರು ಕಟ್ಟಿದ ತೆರಿಗೆ ಹಣವನ್ನು ಕೇಂದ್ರದಿಂದ ತರಲಿ ಎಂದು ಕೆಲವರು ಹೇಳುತ್ತಿದ್ದಾರೆ. ನಾನು ತಂದ ಅನುದಾನ ಜನರ ತೆರಿಗೆ ಹಣ ಎಂಬುದು ಅವರಿಗೆ ತಿಳಿದಿಲ್ಲವೇ? ಗುರುವಾರ ನಾನು ಹಾಗೂ ಪಕ್ಷದ ಮುಖಂಡರು, ಶಾಸಕರು ಸಿಗಂದೂರು ಸೇತುವೆ ವೀಕ್ಷಣೆಗೆ ತೆರಳಿದ್ದು ಉದ್ಘಾಟನಾ ಕಾರ್ಯಕ್ರಮದ ಆಯೋಜನೆ ದೃಷ್ಟಿಯಿಂದಲೇ ಹೊರತು ಪ್ರಚಾರಕ್ಕಾಗಿ ಅಲ್ಲ ಎಂದು ಪರೋಕ್ಷವಾಗಿ ಮಧು ಬಂಗಾರಪ್ಪ ಹಾಗೂ ಗೋಪಾಲಕೃಷ್ಣ ಬೇಳೂರು ಅವರಿಗೆ ಟಾಂಗ್ ನೀಡಿದರು.
ಸಿಗಂದೂರು ಸೇತುವೆಗೆ ಸಾಗರದಿಂದ 12 ಕಿ.ಮೀ. ದೂರದೊಳಗೆ ಸಂಪರ್ಕ ಕಲ್ಪಿಸುವ ದೃಷ್ಟಿಯಿಂದ ಇನ್ನೂ 3 ಸೇತುವೆಗಳನ್ನು ಮುಂದಿನ ದಿನಗಳಲ್ಲಿ ನಿರ್ಮಿಸಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಮಾನದಂಡದ ಪ್ರಕಾರ ಇದು ಅನಿವಾರ್ಯ. ಪ್ರಸ್ತುತ ಸಾಗರ ಹಾಗೂ ಸಿಗಂದೂರು ಸೇತುವೆ ನಡುವೆ 30 ಕಿ.ಮೀ.ಗೂ ಹೆಚ್ಚು ಅಂತರವಿದೆ. ಮುಂದಿನ ದಿನಗಳಲ್ಲಿ ಈ ಅಂತರ 10-12 ಕಿ.ಮೀ.ಗೆ ಇಳಿಯಲಿದೆ ಎಂದು ತಿಳಿಸಿದರು.