ಸಮಾಜದಲ್ಲಿ ಸಮಾನತೆಯಿದ್ದಾಗ ಅಭಿವೃದ್ಧಿ ಸಾಧ್ಯ

17-02-Shiva-2
ರಾಯಚೂರಿನ ಜಿ.ಪಂ. ಸಭಾಂಗಣದಲ್ಲಿ ಕರ್ನಾಟಕದ ಸಾಂಸ್ಕೃತಿಕ ವಿಶ್ವಗುರು ಬಸವಣ್ಣರ ಭಾವಚಿತ್ರವನ್ನು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ಶನಿವಾರ ಅನಾವರಣಗೊಳಿಸಿದರು. ಶಾಸಕ ಬಸನಗೌಡ ದದ್ದಲ್, ಜಿಲ್ಲಾಕಾರಿ ಚಂದ್ರಶೇಖರ ನಾಯಕ, ಎಸ್ಪಿ ಬಿ.ನಿಖಿಲ್, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಜಗದೀಶ ಗಂಗಣ್ಣನವರ್, ನಿವೃತ್ತ ಉಪನ್ಯಾಸಕ ಡಾ.ಪರಮೇಶ್ವರಪ್ಪ ಸಾಲಿಮಠ ಉಪಸ್ಥಿತರಿದ್ದರು.
Published on

ರಾಯಚೂರು: ಸಮಾಜದಲ್ಲಿ ಸಮಾನತೆ ಇದ್ದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿದ್ದು, ಬಸವಣ್ಣ ನೀಡಿದ ವಿಚಾರ, ತತ್ತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಸಮಾನತೆ ಬರಲು ಸಾಧ್ಯವಿದೆ ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ಸ್ಥಳೀಯ ಜಿ.ಪಂ. ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಶನಿವಾರ ಹಮ್ಮಿಕೊಂಡಿದ್ದ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣರ ಭಾವಚಿತ್ರ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವರ್ಗ ರಹಿತ, ದ್ವೇಷ ರಹಿತ ಮತ್ತು ಎಲ್ಲರೂ ಒಂದೇ ಎನ್ನುವ ಭಾವನೆಯಿದ್ದಾಗ ಶಾಂತಿ, ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದರು.
ಮಹಿಳೆಯರಿಗೆ ಸಮಾನತೆ ಒದಗಿಸಿ ಸಮ ಸಮಾಜ ನಿರ್ಮಾಣ ಮಾಡುವಲ್ಲಿ ಬಸವಣ್ಣನವರ ಕೊಡುಗೆ ಅಪಾರವಾಗಿದ್ದು, ಅಂತಹ ಸಾಂಸ್ಕೃತಿಕ ನಾಯಕರ ಸಿದ್ಧಾಂತಗಳನ್ನು, ಅವರ ವಚನಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕಾಗಿದೆ ಎಂದು ಹೇಳಿದರು.
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸನಗೌಡ ದದ್ದಲ್ ಮಾತನಾಡಿ, 12ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ವಿಶ್ವಕ್ಕೆ ತೋರಿಸಿಕೊಟ್ಟ ಬಸವಣ್ಣ, ಜಾತಿ ವ್ಯವಸ್ಥೆ ಕುರಿತು ಜನರಲ್ಲಿದ್ದ ಕೆಟ್ಟ ವಿಚಾರಗಳನ್ನು ತಮ್ಮ ವಚನಗಳ ಮೂಲಕ ಹೋಗಲಾಡಿಸಿದ್ದರು ಎಂದರು.
ನಿವೃತ್ತ ಪ್ರಾಚಾರ್ಯ ಡಾ.ಪರಮೇಶ್ವರಪ್ಪ ಸಾಲಿಮಠ ಮಾತನಾಡಿ, ಬಸವಣ್ಣ ಸಮಾಜದಲ್ಲಿನ ಕಂದಾಚಾರ, ವೌಢ್ಯತೆ, ಅಂಧ ಶ್ರದ್ಧೆಗಳನು ತೊಲಗಿಸುವ ನಿಟ್ಟಿನಲ್ಲಿ ಉತ್ತಮ ವಿಚಾರಧಾರೆಗಳನ್ನು ಜನರಿಗೆ ನೀಡುವ ಮೂಲಕ ವಿಶ್ವಗುರುವಾಗಿದ್ದು, ಇದೀಗ ಸಾಂಸ್ಕೃತಿಕ ನಾಯಕರಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಕಾರಿ ಚಂದ್ರಶೇಖರ ನಾಯಕ, ಎಸ್ಪಿ ಬಿ.ನಿಖಿಲ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಗದೀಶ ಗಂಗಣ್ಣನವರ, ಜಿ.ಪಂ. ಉಪ ಕಾರ್ಯದರ್ಶಿ ಶಶಿಕಾಂತ ಶಿವಪುರೆ, ಮುಖ್ಯ ಯೋಜನಾಕಾರಿ ಡಾ.ಟಿ.ರೋಣಿ ಹಾಗೂ ವಿವಿಧ ಇಲಾಖೆ ಅಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net