ಸಮುದಾಯದ ಸಹಭಾಗಿತ್ವದಿಂದ ಅಭಿವೃದ್ಧಿ ಸಾಧ್ಯ

Development is possible through community participation.
ಹೊನ್ನರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಶಾಲೆಗೆ ದೇಣಿಗೆ ನೀಡಿದ ಮಹನೀಯರನ್ನು ಸನ್ಮಾನಿಸಲಾಯಿತು. ಗೂಳನಗೌಡ ಪಾಟೀಲ, ಶೃತಿ ನೀಲಮ್ಮನವರ, ಸಂಗಪ್ಪ ಸಂಗಮ ಮತ್ತಿತರರಿದ್ದಾರೆ.
Published on

ಅಮೀನಗಡ: ಸಮುದಾಯದ ಸಹಭಾಗಿತ್ವದಿಂದ ಮಾತ್ರ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯ ಎಂದು ನಿವೃತ್ತ ಶಿಕ್ಷಕ ಗೂಳನಗೌಡ ಪಾಟೀಲ ಹೇಳಿದರು.

ಹೊನ್ನರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರದ ಅನುದಾನವನ್ನು ನೆಚ್ಚಿಕೊಂಡು ಶಾಲೆಯ ಭೌತಿಕ ಮತ್ತು ಶೈಕ್ಷಣಿಕ ಅಭಿವೃದ್ಧಿ ಮಾಡುವುದು ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ಹೊನ್ನರಹಳ್ಳಿಯ ಜನ ದೇಣಿಗೆ ನೀಡಿ ಮಕ್ಕಳಿಗೆ ಊಟದ ಕೋಣೆ ನಿರ್ಮಿಸಿದ್ದು ಶ್ಲಾಘನೀಯ ಎಂದರು.

ರಕ್ಕಸಗಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶೃತಿ ನೀಲಮ್ಮನವರ ಮಾತನಾಡಿ, ಮನುಷ್ಯನಿಗೆ ಆತ್ಮಸಾಕ್ಷಿ ಬಹಳ ಮುಖ್ಯ. ನಾವು ಮಾಡುವ ತಪ್ಪುಗಳನ್ನು ಬೇರೆಯವರು ತೋರಿಸುವ ಮುನ್ನ ಅದು ನಮ್ಮನ್ನು ಎಚ್ಚರಿಸುತ್ತದೆ ಎಂದರು.

ಆಧ್ಯಾಪಕ ಎನ್.ಸಿ. ಘಟ್ಟಿಗನೂರ ಮಾತನಾಡಿ, ಎಷ್ಟೋ ಶಾಲೆಗಳಲ್ಲಿ ಭೌತಿಕ ಸೌಲಭ್ಯವಿದ್ದರೂ ಶಿಕ್ಷಕರ ಕೊರತೆ ಇರುತ್ತದೆ. ಕೆಲವು ಕಡೆ ಕ್ರಿಯಾಶೀಲ ಸಂಪನ್ಮೂಲ ಶಿಕ್ಷಕರಿದ್ದರೂ ಮೂಲ ಸೌಲಭ್ಯಗಳ ಕೊರತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಶಿಕ್ಷಕರೇ ಸ್ವಂತ ಹಣ ಖರ್ಚು ಮಾಡಿ, ದಾನಿಗಳಿಂದ ಕಾಣಿಕೆ ಸಂಗ್ರಹಿಸಿ ಸೌಲಭ್ಯ ಕಲ್ಪಿಸಲು ಮುಂದಾಗಿರುವುದು ಅವರ ವೃತ್ತಿ ಬದ್ಧತೆಯನ್ನು ತೋರಿಸುತ್ತದೆ ಎಂದರು.

ಸಂಪನ್ಮೂಲ ವ್ಯಕ್ತಿ ಸಂಗಪ್ಪ ಸಂಗಮ, ವಿದ್ಯಾರ್ಥಿಗಳಾದ ಅಮೃತ ಕೊಣ್ಣೂರ, ಗೋಲಪ್ಪ ಕೊಣ್ಣೂರ, ವಿದ್ಯಾಶ್ರೀ ಅಮಾತಿಗೌಡರ ಮಾತನಾಡಿದರು.

ಶಾಲೆಗೆ ದೇಣಿಗೆ ನೀಡಿದ ಮಹನೀಯರನ್ನು ಸನ್ಮಾನಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ರಾಮನಗೌಡ ಪವಾಡಿಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರಾದ ಈರಪ್ಪ ಮಾಗಿ, ಬಸಮ್ಮ ಪವಾಡಿಗೌಡ್ರ, ಉಮಾ ಬಲಕುಂದಿ, ರುದ್ರಗೌಡ ಅಮಾತಿಗೌಡರ, ರಾಮನಗೌಡ ಮಾಗಿ, ಯಲಗುರದಪ್ಪ ಗುಡದನ್ನವರ, ಸಿದ್ದು ಶೀಲವಂತರ, ಸಂಗಪ್ಪ ಈರಣ್ಣವರ, ಅಂದಾನೆಪ್ಪ ಕೊಣ್ಣೂರ, ಸಂಗನಬಸಪ್ಪ ಸೂಳಿಬಾವಿ, ರತ್ನವ್ವ ಕಡಿವಾಲ, ಸಂಗನಬಸಯ್ಯ ಹಿರೇಮಠ, ಮಹಾಂತೇಶ ಅಳ್ಳೊಳ್ಳಿ, ವೀರಭದ್ರಪ್ಪ ಕೊಳ್ಳೊಳ್ಳಿ, ಮಲ್ಲಿಕಸಾಬ ನದಾ, ಮಹಾಂತೇಶ ಚಲವಾದಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net