

ಕೆ.ಆರ್.ನಗರ: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯಿಂದ ಯೋಜನಾಬದ್ಧ ನಗರವನ್ನಾಗಿ ಕೃಷ್ಣರಾಜನಗರ ಪಟ್ಟಣವನ್ನು ನಿರ್ಮಾಣ ಮಾಡಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಾಗಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಗರುಡಗಂಬ ವೃತ್ತದಲ್ಲಿ ಗರುಡಗಂಬ ಸಂವೇದನಾ ಸೇವಾ ಸಂಘದ ವತಿಯಿಂದ ಗುರುವಾರ ಆಯೋಜಿಸಿದ್ದ ಗರುಡಗಂಬದ 90ನೇ ವರ್ಷದ ವಾರ್ಷಿಕೋತ್ಸವ ಹಾಗೂ ವಿಶೇಷ ಸಂಚಿಕೆ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಒಂದು ಒಳ್ಳೆಯ ಕೆಲಸ ಮಾಡುವಾಗ ತೊಂದರೆ ಅಡಚಣೆಗಳು ಇದ್ದೆ ಇರುತ್ತವೆ. ಆದರೆ ನಿರಂತರ ಪ್ರಯತ್ನ ಯಶಸ್ವಿಯಾಗಲಿದೆ ಎಂದು ಹೇಳಿದರು.
ಗರುಡಗಂಬದ ಸ್ವಾಮಿ ಅವರು ಸಾಮಾಜಿಕ ಕಳಕಳಿ ಹೊಂದಿರುವ ಹೋರಾಟಗಾರಾಗಿದ್ದು, ರೈತರ ಹಿತ ಕಾಯುವ ಸಲುವಾಗಿ ಚಳವಳಿ ಮಾಡುವ ಸಂದರ್ಭದಲ್ಲಿ ಗರುಡಗಂಬವೇರಿದ ಕೆ.ಎಲ್.ಸ್ವಾಮಿ ಅವರು ಗರುಡಗಂಬದ ಸ್ವಾಮಿ ಎಂದು ಕರೆಸಿಕೊಂಡಿದ್ದು, ಈ ಕಂಬವು ಪ್ರಚಾರಗೊಳ್ಳುವಲ್ಲಿ ಇವರ ಪಾತ್ರ ಪ್ರಮುಖ. ಅವರಿಗೆ ಗರುಡಗಂಬದ ಮೇಲೆ ಪೂಜ್ಯ ಭಾವನೆಯಿದ್ದು ಅದರ ಸೌಂದರ್ಯ ಹೆಚ್ಚಿಸಲು ಹೂ ಗಿಡಗಳನ್ನು ಬೆಳೆಸಿ ಪೋಷಿಸುವುದರ ಜತೆಗೆ ತಪ್ಪದೇ ವಾರ್ಷಿಕೋತ್ಸವವನ್ನು ಆಚರಣೆ ಮಾಡಿಕೊಂಡು ಬರುತ್ತಿರುವುದು ಇತರರಿಗೆ ಮಾದರಿಯಾಗಿದೆ. ಅವರಿಗೆ ಪಟ್ಟಣದ ನಾಗರಿಕರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ರೈತರು ಮತ್ತು ಕಬ್ಬು ಬೆಳೆಗಾರರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಚುಂಚನಕಟ್ಟೆಯ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆಗೆ ಪಡೆದಿರುವ ನಿರಾಣಿ ಶುಗರ್ಸ್ ಗುತ್ತಿಗೆ ಕರಾರು ಮಾಡಿಸಿಕೊಳ್ಳುವಂತೆ ಸರ್ಕಾರಕ್ಕೆ ಈ ಹಿಂದೆ ಮನವಿ ಮಾಡಲಾಗಿದ್ದು, ಫೆಬ್ರವರಿ ತಿಂಗಳಿನಲ್ಲಿ 40 ವರ್ಷಗಳಿಗೆ ಸರ್ಕಾರದೊಂದಿಗೆ ಕರಾರು ನೋಂದಣಿಯಾಗಲಿದ್ದು, ಆನಂತರ ಕಾರ್ಖಾನೆ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, ರೈತರು ತಮ್ಮ ಜಮೀನನ್ನು ಮಾರಾಟ ಮಾಡಲು ಅಕ್ಕಪಕ್ಕದ ಜಮೀನಿನ ಮಾಲೀಕರ ಒಪ್ಪಿಗೆ ಪಡೆಯಬೇಕೆಂಬ ಕಾನೂನನ್ನು ರಾಮಕೃಷ್ಣ ಹೆಗಡೆ ಅವರ ಸರ್ಕಾರ ಜಾರಿಗೆ ತರುವುದನ್ನು ವಿರೋಧಿಸಿ ರೈತಪರ ಸಂಘಟನೆಗಳು ಹೋರಾಟ ಮಾಡುವ ಸಂದರ್ಭದಲ್ಲಿ ಗರುಡಗಂಬವೇರಿ ಪ್ರತಿಭಟನೆ ಮಾಡಿದ್ದರು ಎಂದು ಸ್ಮರಿಸಿದರು.
ರಾಜ್ಯದಲ್ಲಿ ಯೋಜನಾಬದ್ಧವಾದ ಸುಂದರ ಪಟ್ಟಣ ಕೆ.ಆರ್.ನಗರ ಮತ್ತು ಭದ್ರಾವತಿ ಆಗಿವೆ. ನಮ್ಮ ತಾಲೂಕು ಬಹಳ ವಿಶೇಷವಾಗಿದ್ದು ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ತಾಲೂಕಿನ ಬಗ್ಗೆ ಚರಿತ್ರೆ ಬರೆದು ಜನರಿಗೆ ತಿಳಿಸುವ ಜತೆಗೆ ಇವುಗಳ ನೆನಪಿಗಾಗಿ ಕಾರ್ಯಕ್ರಮಗಳನ್ನು ರೂಪಿಸಿ ವಿದ್ಯಾರ್ಥಿಗಳು ಮತ್ತು ಯುವ ಪೀಳಿಗೆಗೆ ಉತ್ಸಾಹ ತುಂಬಿ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ ಎಂದರು.
ಕೆ.ಆರ್.ನಗರದ ಪುರಸಭೆಯವರು ಪಟ್ಟಣದ ಸೌಂದರ್ಯವನ್ನು ಹಾಳು ಮಾಡುತ್ತಿದ್ದಾರೆ ಎಂದು ದೂರಿದ ಎಚ್.ವಿಶ್ವನಾಥ್, ಸಂಪೂರ್ಣ ಸ್ವಚ್ಛತೆ ಮಾಡುವಲ್ಲಿ ವಿಫಲರಾಗಿರುವ ಇವರು ಎಲ್ಲೆಂದರಲ್ಲಿ ತರಕಾರಿ ಸೇರಿದಂತೆ ಇತರ ವ್ಯಾಪಾರಸ್ಥರು ರಸ್ತೆ ಬದಿಗಳಲ್ಲೇ ವ್ಯಾಪಾರ ಮಾಡುತ್ತಿದ್ದು ನಗರ ಮಾಲಿನ್ಯಗೊಂಡಿದೆ. ಈ ಬಗ್ಗೆ ಶಾಸಕರು ಮತ್ತು ಪುರಸಭೆ ಆಡಳಿತ ಎಚ್ಚರ ವಹಿಸಬೇಕೆಂದು ಸಲಹೆ ನೀಡಿ, ಜನರು ಇದನ್ನು ಪ್ರಶ್ನಿಸಬೇಕು ಎಂದರು.
ಕಾರ್ಯಕ್ರಮ ಕುರಿತು ಗರುಡಗಂಬ ಸಂವೇದನಾ ಸೇವಾ ಸಂಘದ ಅಧ್ಯಕ್ಷ ಗರುಡಗಂಬ ಸ್ವಾಮಿ ಮಾತನಾಡಿದರು. ಪುರಸಭೆ ಅಧ್ಯಕ್ಷ ಶಿವುನಾಯಕ್, ಸದಸ್ಯರಾದ ಕೆ.ಪಿ.ಪ್ರಭುಶಂಕರ್, ಸೈಯದ್‌ಸಿದ್ದಿಕ್, ಮಾಜಿ ಸದಸ್ಯ ಕೆ.ವಿನಯ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ.ರಮೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಡಿ.ನಟರಾಜ್, ತಾಲೂಕು ರೈತ ಸಂಘದ ಅಧ್ಯಕ್ಷ ರಾಘವೇಂದ್ರ, ಯುವ ರೈತ ಘಟಕದ ಅಧ್ಯಕ್ಷ ಅರ್ಜುನಹಳ್ಳಿ ರಾಮಪ್ರಸಾದ್, ರೈತ ಮುಖಂಡ ಎಂ.ಜೆ.ಕುಮಾರ್, ಸಾಹಿತಿ ಹೆಗ್ಗಂದೂರು ಪ್ರಭಾಕರ್, ವಕೀಲರಾದ ಜಿ.ಎಲ್.ಧರ್ಮ, ಶಿವರಾಜು, ಮುಖಂಡರಾದ ಕೃಷ್ಣಯ್ಯ, ಕೆ.ಎಸ್.ಮಂಜುನಾಥ್, ಮಹದೇವ್ ಇತರರಿದ್ದರು.