

ಹೊಳೆನರಸೀಪುರ: ಕೇಂದ್ರ ಸರ್ಕಾರ ಸಂಸದರಿಗೆ ನೀಡುತ್ತಿರುವ ಅನುದಾನದಿಂದ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದರು.
ತಾಲೂಕಿನ ಕಡವಿನ ಹೊಸಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಸಮುದಾಯ ಭವನದ ಹೆಚ್ಚುವರಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಸಂಸದರಿಗೆ ಕೇಂದ್ರ ಸರ್ಕಾರದಿಂದ ವಾರ್ಷಿಕ 5 ಕೋಟಿ ರೂ. ಅನುದಾನ ಬಿಡುಗಡೆಯಾಗುತ್ತದೆ. ಇದರಿಂದ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗಿದೆ. ಸಾರ್ವಜನಿಕರು ಜನಪ್ರತಿನಿಧಿಗಳಿಂದ ಅಭಿವೃದ್ಧಿ ವಿಷಯವಾಗಿ ಹೆಚ್ಚಿನ ನಿರೀಕ್ಷೆ ಹೊಂದಿರುತ್ತಾರೆ. ಹಾಗಾಗಿ ಎಲ್ಲ ಕ್ಷೇತ್ರಗಳಿಗೂ ಅನುದಾನ ಹಂಚಿಕೆ ಮಾಡಬೇಕಾಗಿರುವುದರಿಂದ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ. ಕೇಂದ್ರ ಸರ್ಕಾರಕ್ಕೆ ಎಲ್ಲ ಸಂಸದರು ಸೇರಿ ಅನುದಾನವನ್ನು ಹೆಚ್ಚಿಗೆ ನೀಡುವಂತೆ ಮನವಿ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ವಾರ್ಷಿಕ ಹೆಚ್ಚಿನ ಅನುದಾನ ದೊರೆಯುವ ಭರವಸೆ ಇದೆ. ಆಗ ಜಿಲ್ಲೆಯ ಅಭಿವೃದ್ಧಿ ಕೆಲಸಗಳಿಗೆ ಅನುಕೂಲವಾಗಲಿದೆ ಎಂದರು.
ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಲಾಗಿದ್ದು, ಅದರಂತೆ ಸರ್ಕಾರದಿಂದ ಅನುದಾನ ದೊರೆಯಲಿದೆ. ಹೆದ್ದಾರಿಗಳ ಅಭಿವೃದ್ಧಿಯಾಗಲಿದೆ ಎಂದು ನುಡಿದರು.
ಕೆಆರ್‌ಐಡಿಎಲ್ ವತಿಯಿಂದ 10 ಲಕ್ಷ ರೂ. ವೆಚ್ಚದಲ್ಲಿ ಕಡವಿನಹೊಸಳ್ಳಿ ಡಾ.ಬಿ.ಆರ್.ಅಂಬೇಡ್ಕರ್ ಭವನದ ಅಭಿವೃದ್ಧಿ, 13 ಲಕ್ಷ ರೂ. ವೆಚ್ಚದಲ್ಲಿ ದೊಡ್ಡ ಕುಂಚೆವು ಗ್ರಾಮದ ಶಾಲಾ ಕೊಠಡಿ ನಿರ್ಮಾಣ, 7 ಲಕ್ಷ ರೂ. ವೆಚ್ಚದಲ್ಲಿ ಹರಿಹರ ಪುರದ ಸಿಸಿ ರಸ್ತೆ ಒಳಗೊಂಡಂತೆ ಸಂಸದರ ನಿಧಿಯಿಂದ ತಾಲೂಕಿನ ಲಕ್ಕೂರು, ಚಿಟ್ಟನಹಳ್ಳಿ, ಲಕ್ಷ್ಮೀಪುರ, ಹಳೇಕೋಟೆ ಗ್ರಾಮಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದರು ಚಾಲನೆ ನೀಡಿದರು. ಇದೇ ವೇಳೆ ಗ್ರಾಮದ ಮುಖಂಡರಾದ ಶಿವಪ್ಪ, ಶಿವಣ್ಣ, ಚಂದ್ರಹಾಸ ಮತ್ತಿತರರು ಇದ್ದರು.